ಪತ್ನಿಯಿಂದ ಪತಿಗೆ ಜೀವಂತ ಲಿವರ್ ದಾನ

ಮೈಸೂರು, ಆ.13- ಪ್ರಪ್ರಥಮ ಬಾರಿಗೆ ಮೈಸೂರಿನ ಅಪೋಲೋ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ಜೀವಂತ ವ್ಯಕ್ತಿಯ ಲಿವರ್ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಪತ್ನಿಯೇ ತನ್ನ ಪತಿಗೆ ಲಿವರ್ ದಾನ ಮಾಡಿ ಗಮನ ಸೆಳೆದಿದ್ದಾರೆ.
ಈ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾದವರು ಕನಕಪುರದ ದಂಪತಿಗಳು. ಪತ್ನಿ ರಾಣಿ ತನ್ನ ಪತಿ ಸೋಮಶೇಖರ್ ಗೆ ಲಿವರ್ ನೀಡಿ ಗಮನ ಸೆಳೆದವರು.
ಲೈವ್ ಲಿವರ್ ದಾನ ಮಾಡುವ ಬಗ್ಗೆ ರೋಗಿಗಳ ಕುಟುಂಬಕ್ಕೆ ಮೊದಲು ತಿಳಿಸಲಾಯಿತು ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ. ಭಾರತೀಶ ರೆಡ್ಡಿ ಸೋಮವಾರ ಮಾಧ್ಯಮಗಳಿಗೆ ವಿವರಿಸಿದರು.
ಕೌನ್ಸೆಲಿಂಗ್ ವೇಳೆ ರೋಗಿಯ ಪತ್ನಿಯು ತನ್ನ ಪತಿಗೆ ಲಿವರ್ ದಾನ ಮಾಡಲು ಇಚ್ಚಿಸಿದರು. ಅನಂತರ ರೋಗಿ ಮತ್ತು ಅವರ ಪತ್ನಿಗೆ ಟ್ರಾನ್ಸ್ ಪ್ಲಾಂಟ್ ಮಾಡಲು ಅವಶ್ಯಕವಿರುವ ಅನೇಕ ಪರೀಕ್ಷೆ ಮಾಡಲಾಯಿತು ಎಂದರು.
ಪರೀಕ್ಷೆ ನಡೆಸಿದಾಗ ಲಿವರ್ ಕಸಿ ಮಾಡಬಹುದೆಂಬುದು ತಜ್ಞ ವೈದ್ಯರ ತಂಡಕ್ಕೆ ಖಚಿತವಾಯಿತು. ಎಲ್ಲಾ ಪ್ರಕ್ರಿಯೆಗಳ ನಂತರ ರೋಗಿಗೆ ಲೈವ್ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು ಎಂದು ಹೇಳಿದರು.
ಈ ಶಸ್ತ್ರ ಚಿಕಿತ್ಸೆಗೆ ಅವಶ್ಯಕವಾದ ಎಲ್ಲಾ ದಾಖಲೆಗಳನ್ನು ಕ್ರೂಡಿಕರಿಸಿ ಹಾಗೂ ದಂಪತಿ ಒಪ್ಪಿಗೆ ಪಡೆದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅಪೋಲೋ ಆಸ್ಪತ್ರೆಯ ವೈದ್ಯರ ತಂಡ ಜುಲೈ 31 ರಂದು ಯಶಸ್ವಿಯಾಗಿ ಅಂಗ ಕಸಿ ಮಾಡಿದ್ದು, ಇದು ಅಪೋಲೋ ಆಸ್ಪತ್ರೆಗೆ ಹೆಮ್ಮೆಯ ವಿಷಯ ಎಂದು ಎನ್.ಜಿ. ಭಾರತೀಶ ರೆಡ್ಡಿ ವಿವರಿಸಿದರು.

Leave a Comment