‘ಪತ್ತನಾಜೆ’ಯ ಭರ್ಜರಿ ಕೋಳಿ ವ್ಯಾಪಾರಕ್ಕೆ ಕೊರೊನಾ ಸಂಪೂರ್ಣ ಲಾಕ್‌ಡೌನ್ ತಡೆ..!

ಪುತ್ತೂರು, ಮೇ ೨೫- ತುಳುನಾಡಿನ ಜನತೆಯ ಅತ್ಯಂತ ನಂಬಿಕೆಯ ದಿನವಾದ ‘ಪತ್ತನಾಜೆ’ ದೈವಗಳ ವಾರ್ಷಿಕ ಆಚರಣೆಯ ಕೊನೆಯ ದಿನ. ಪತ್ತನಾಜೆಯ ದಿನ ಕೋಳಿ ವ್ಯಾಪಾರಸ್ತರಿಗೆ ಭರ್ಜರಿ ವ್ಯಾಪಾರ. ಬಹುಷ ತುಳುನಾಡಿನ ದೈವಾಚರಣೆಯ ನಂಬಿಕೆಯ ಜನರಲ್ಲಿ ಪತ್ತನಾಜೆಯ ದಿನ ಕೋಳಿ ಪದಾರ್ಥ ಮಾಡದ ಮನೆಗಳೇ ಇರಲಿಕ್ಕಿಲ್ಲ. ಆದರೆ ಈ ಬಾರಿ ಮಾತ್ರ ಕೊರೊನಾ ಹೆಮ್ಮಾರಿಯ ಕಾರಣ ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಭರ್ಜರಿ ವ್ಯಾಪಾರಕ್ಕೆ ತಡೆ ಬಿದ್ದಿದೆ.
ಬೇಷ ಮಾಸ( ಮೇ೨೪)ದ ಹತ್ತನೆಯ ದಿನವಾಗಿರುವ ಪತ್ತನಾಜೆ ತುಳುನಾಡಿನಲ್ಲಿ ದೈವಾಚರಣೆ ಸಂಭ್ರಮಗಳಿಗೆ ವರ್ಷದ ಕೊನೆಯ ದಿನವಾಗಿದೆ. ಪತ್ತನಾಜೆಯ ದಿನ ದೈವಗಳಿಗೆ ಪರ್ವ ನೀಡುವ ಸಂಪ್ರದಾಯ ಬೆಳೆದುಬಂದಿದೆ. ಪ್ರತೀ ಕುಟುಂಬ ದೈವಗಳಿಗೆ ಹತ್ತಾರು ಮನೆಗಳ ಸದಸ್ಯರು ಸೇರಿಕೊಂಡು ತಮ್ಮ ಕುಟುಂಬಗಳ ದೈವಗಳನ್ನು ಆರಾಧನೆ ಮಾಡುವ ಹಾಗೂ ಈ ದೈವಗಳಿಗೆ ಕೋಳಿ ಬಲಿ ನೀಡುವ ಕಾರ್ಯ ನಡೆಯುತ್ತದೆ. ನಂತರ ಕುಟುಂಬ ದೈವಗಳಿಗೆ ಪರ್ವ ನೀಡುವ ಸಂಪ್ರದಾಯ ಇಲ್ಲ. ಪತ್ತನಾಜೆಯ ನಂತರ ಮಳೆಗಾಲ ಆರಂಭ ಎಂಬುವುದು ತುಳುವರ ನಂಬಿಕೆ. ಹಾಗಾಗಿ ಮಳೆಗಾಲದ ಮಳೆರಾಯನ ಅಬ್ಬರದಲ್ಲಿ ಈ ದೈವಗಳ ಆಚರಣೆ ಕಷ್ಟ ಎನ್ನುವ ಹಿನ್ನಲೆಯಲ್ಲಿ ಈ ಸಂಪ್ರದಾಯ ಬೆಳೆದು ಬಂದಿದೆ. ತುಳುನಾಡಿನ ಕಲೆ ಯಕ್ಷಗಾನಕ್ಕೂ ಪತ್ತನಾಜೆಯ ದಿನವೇ ಅಂತ್ಯ ಹಾಡಲಾಗುತ್ತದೆ. ಆನಂತರ ಯಕ್ಷಗಾನ ತಂಡಗಳು ಪರ್ಯಟನೆ ಮಾಡುವುದಿಲ್ಲ.
ಊರಿನ ಕೋಳಿಗಳಿಗೆ ಡಿಮ್ಯಾಂಡ್
ದೈವಾಚರಣೆಯಲ್ಲಿ ಊರಿನ ನಾಟಿ ಕೋಳಿಗಳಿಗೆ ಅಪರಿಮಿತ ಬೇಡಿಕೆ. ದೈವಾಚರಣೆಯಲ್ಲಿ ದೈವಗಳಿಗೆ ಬಲಿ ಕೊಡಲು ಊರಿನ ನಾಟಿ ಕೋಳಿಗಳೇ ಬೇಕು. ಹಾಗಾಗಿ ಕೆಜಿಯೊಂದರ ಕೋಳಿಗೆ ರೂ.೫೦೦ ರಿಂದ ೬೦೦ ರಷ್ಟು ಬೆಲೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ತುಳುನಾಡಿನ ಮಂದಿ ಕೋಳಿ ಸಿಗದೆ ಪರದಾಟ ಮಾಡುವಂತಾಗಿತ್ತು. ಬಹುತೇಕ ಮಂದಿ ಪತ್ತನಾಜೆಯ ಹಿಂದಿನ ದಿನವೇ ಈ ಊರಿನ ಕೋಳಿಗಳನ್ನು ಖರೀದಿ ಮಾಡಿದ್ದರೂ, ಕೋಳಿ ವ್ಯಾಪಾರದ ಅಂಗಡಿಗಳಿಗೆ ಮಾತ್ರ ಪತ್ತನಾಜೆಯ ಭರ್ಜರಿ ವ್ಯಾಪಾರದ ಕನಸು ನನಸಾಗಿಲ್ಲ. ಸಾಮಾನ್ಯವಾಗಿ ಪ್ರತೀ ವರ್ಷ ಈ ಕೋಳಿ ಮಾಂಸ ವ್ಯಾಪಾರ ಮಾಡುವ ಒಂದೊಂದು ಅಂಗಡಿಗಳಿಗೂ ಪತ್ತನಾಜೆಯ ದಿನ ಕ್ವಿಂಟಾಲ್ ಗಟ್ಟಲೆ ಕೋಳಿ ಮಾಂಸ ವ್ಯಾಪಾರವಾಗುತ್ತಿತ್ತು. ಆದರೆ ಈ ಬಾರಿ ಅಂಗಡಿ ಬಾಗಿಲು ತೆರೆಯಲೂ ಅವಕಾಶ ಇಲ್ಲದಂತಾಗಿದೆ.
ಪತ್ತನಾಜೆಯ ದಿನ ಮಾರಾಟ ಮಾಡಲೆಂದೇ ಗ್ರಾಮೀಣ ಭಾಗದಲ್ಲಿ ಕೆಲ ಮಂದಿ ಊರಿನ ಕೋಳಿಗಳನ್ನು ಸಾಕುತ್ತಾರೆ. ಅಂಗಡಿಗಳ ಮಾಲಕರು ತಮಿಳುನಾಡಿನ ಕೋಳಿಗಳನ್ನು ತಂದು ಹೆಚ್ಚು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಈ ಬಾರಿಯೂ ಈ ಕೋಳಿ ಮಾಂಸ ಮಾರಾಟದ ಅಂಗಡಿಗಳ ಮಾಲಕರು ತಮಿಳುನಾಡಿನ ಕೋಳಿಗಳನ್ನು ತಂದು ಸಂಗ್ರಹ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಕೋಳಿ ವ್ಯಾಪಾರ ಮಾಡುವ ಮಂದಿ ನಾಟಿ ಕೋಳಿಗಳನ್ನು ಸಾಕಿ ಇಟ್ಟುಕೊಂಡಿದ್ದಾರೆ. ಆದರೆ ಕೊರೊನಾ ಇವರ ಲಾಭದ ಮೇಲೆ ಕೆಂಗಣ್ಣು ಬೀರಿರುವ ಕಾರಣ ಈ ಬಾರಿ ದೊಡ್ಡ ಮಟ್ಟದ ಪ್ರಯೋಜನವಾಗಿಲ್ಲ.
ಆದರೂ ಹಳ್ಳಿಗಳಲ್ಲಿ ಸ್ವಲ್ಪ ಮಟ್ಟಿನ ವ್ಯಾಪಾರ ನಡೆದಿದೆ. ಕಾರಣ ಮನೆಯಲ್ಲಿ ಸಾಕಿರುವ ಈ ನಾಟಿ ಕೋಳಿಗಳನ್ನು ಹಳ್ಳಿಯ ಇತರ ಮಂದಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ. ಆದರೂ ಬೆಲೆಯಲ್ಲಿ ಮಾತ್ರ ಕಡಿತವಿಲ್ಲ. ೨ ಕೆಜಿ ತೂಕದ ನಾಟಿ ಕೋಳಿಗೆ ರೂ.೧೦೦೦ ದಿಂದ ೧೨೦೦ ನೀಡಬೇಕಾಗಿದೆ. ಇಲ್ಲವಾದರೆ ದೈವಗಳಿಗೆ ಬಲಿ ಕೊಡಲು ಕೋಳಿ ಇಲ್ಲ. ಹಾಗಾಗಿ ದೈವಗಳಿಗೆ ಕೋಪ ಬರಬಾರದು ಎಂಬ ನಂಬಿಕೆಯ ಹಿನ್ನಲೆಯಲ್ಲಿ ಬೆಲೆ ಅಧಿಕವಾದರೂ ಖರೀದಿ ಮಾಡುವುದು ಅನಿವಾರ್ಯವಾಗಿದೆ.
ಕೊರೊನಾ ಲಾಕ್ ಡೌನ್ ಆರಂಭವಾದ ಸಮಯದಲ್ಲಿ ಕೆಜಿಯೊಂದಕ್ಕೆ ಕೇವಲ ರೂ.೩೦ ಗೆ ಕೋಳಿ ಮಾಂಸ ಸಿಗುತ್ತಿದ್ದ ಮಂದಿಗೆ ಕಳೆದ ಎರಡು ವಾರಗಳಿಗೆ ಕೋಳಿಮಾಂಸದ ಬೆಲೆ ದೊಡ್ಡ ಶಾಕ್ ನೀಡಿದೆ. ಬ್ರಾಯ್ಲರ್, ಗಿಳಿರಾಜ ಮತ್ತಿತರ ತಳಿಗಳ ಕೋಳಿ ಮಾಂಸ ಜನತೆಯ ಪಾಲಿಗೆ ಕಹಿಯಾಗಿದೆ. ೧ ಕೆಜಿ ಕೋಳಿ ಮಾಂಸಕ್ಕೆ ರೂ.೨೩೦ ಕೊಟ್ಟು ಖರೀದಿ ಮಾಡಬೇಕಾಗಿದೆ. ಆದರೂ ಪತ್ತನಾಜೆಗೆ ಕೋಳಿ ಮಾಂಸ ಬೇಕು ಎನ್ನುವ ಹಿನ್ನಲೆಯಲ್ಲಿ ಖರೀದಿ ಮಾಡಿದ ಮಂದಿ ಪಾಲಿಗೆ ಕೊರೊನಾದಷ್ಟೇ ಸಂಕಷ್ಟವನ್ನು ಕೋಳಿ ಮಾಂಸದ ಬೆಲೆಯೂ ಉಂಟು ಮಾಡಿದೆ.

Share

Leave a Comment