ಪಡೆದುಕೊಳ್ಳುತ್ತದೆ ಕಣ್ಣಹನಿಯ ಕಾಣಿಕೆ

ಚಿತ್ರ : ಪುಷ್ಪಕ ವಿಮಾನ
ನಿರ್ದೇಶನ : ಎಸ್. ರವೀಂದ್ರನಾಥ್
ನಿರ್ಮಾಪಕರು : ವಿಖ್ಯಾತ್, ದೇವೇಂದ್ರ ರೆಡ್ಡಿ, ದೀಪಕ್ ಕೃಷ್ಣ, ದೇವಾಂತ್ ರಾಜ್‌ಗೌಡ
ತಾರಾಗಣ : ರಮೇಶ್ ಅರವಿಂದ್, ಯುವಿನಾ, ರಚಿತಾರಾಮ್, ರವಿಕಾಳೆ, ಶ್ರೀಧರ್ ಮುಂತಾದವರು.
ರೇಟಿಂಗ್ : ****

ಪದಗಳಲ್ಲಿ ಹಿಡಿದಿಡುವ ಸಿನೆಮಾ ಅಲ್ಲವೇ ಅಲ್ಲ ‘ಪುಷ್ಪಕ ವಿಮಾನ’ ನೋಡಿಯೇ ಅನುಭವಿಸಬೇಕು. ಹೃದಯದೊಳಗೆ ಇಳಿಯುವ ಸಿನೆಮಾ ಕಣ್ಣಹನಿಯ ಕಾಣಿಕೆ ಪಡೆದುಕೊಳ್ಳುತ್ತದೆ.
ಪುಷ್ಪಕ ವಿಮಾನದಂಥ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದರಲ್ಲೇ ಸೂಕ್ಷ್ಮ ಸಂವೇದನೆಯ ಮಾನವೀಯ ಮನಸುಗಳು ಕಾಣಿಸುತ್ತವೆ. ಗಲ್ಲುಶಿಕ್ಷೆಗೆ ಒಳಗಾದ ವ್ಯಕ್ತಿ ನಿರಪರಾಧಿ ಎಂದು ಎಷ್ಟೋ ವರ್ಷಗಳ ನಂತರ ಸ್ವತಃ ಮಗಳು ಸಾಭೀತು ಮಾಡುವ ಕಥೆ. ಆ ಮಗಳು ಪುಟ್ಟವಳಾಗಿದ್ದಾಗ ಬುದ್ಧಿಮಾಂದ್ಯ ತಂದೆಯ (ವ್ಯಕ್ತಿ) ಜಗತ್ತಾಗಿರುತ್ತಾಳೆ. ಅವರಿಬ್ಬರದೇ ಮುಗ್ದ ಸುಂದರ ಜಗತ್ತಿನಲ್ಲಿ ಹಾರುವ ವಿಮಾನವನ್ನು ನೋಡುವುದೇ ಸಂಭ್ರಮ. ಹಣವನ್ನು ಕೂಡಿಟ್ಟು ಪುಟ್ಟ ಮಗಳು ಆಸೆಪಟ್ಟಂತ ಆಟಿಕೆಯ ವಿಮಾನವನ್ನು ಮಾರನೇ ದಿನ ಕೊಡಿಸಬೇಕೆಂದಿದ್ದಾಗ ಪೊಲೀಸ್ ಕಮೀಷನರ್ ತನ್ನ ಪುಟ್ಟ ಮಗಳಿಗೆ ಖರೀದಿಸಿ ಕೊಡುತ್ತಾನೆ. ತಂದೆ ತನ್ನ ಮಗಳಿಗೆ ಬೇಕೆಂದು ಕೇಳಿದ್ದಕ್ಕೆ ಹೊಡೆಯುವ ದಬ್ಬಾಳಿಕೆ ನಡೆಯುತ್ತದೆ ಅಲ್ಲಿಂದ ಕಥೆ ತಿರುವು ಪಡೆದುಕೊಳ್ಳುತ್ತದೆ. ನಂತರದಲ್ಲಿ ಕಮೀಷನರ್ ಮಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆಂದು ತಂದೆಯನ್ನು ಪೊಲೀಸರು ಬಂಧಿಸುತ್ತಾರೆ ಅದೇ ಅವನನ್ನು ಗಲ್ಲು ಶಿಕ್ಷೆಗೆ ತಂದು ನಿಲ್ಲಿಸುತ್ತದೆ. ತಮ್ಮ ಮುಗ್ಧತೆಯ ಸುಂದರ ಪ್ರಪಂಚದಿಂದ ತಂದೆ ಮಗಳು ಬೇರ್‍ಪಡುತ್ತಾರೆ. ಜೈಲಿನಲ್ಲಿರುವ ಅಪರಾಧಿಗಳಾಗಿಯೂ ಮಾನವೀಯ ಸಂಬಂಧಗಳಿಗೆ ಮಿಡಿಯುವ ಖೈದಿಗಳ ನಡುವೆ ತಂದೆ ಇರುವಂತಾಗುತ್ತದೆ. ಆಡಳಿತ ವ್ಯವಸ್ಥೆಯ ನಡುವೆ ಅಲ್ಲಿಯದ್ದೇ ಇನ್ನೊಂದು ಜಗತ್ತು. ಕಾನೂನು ವ್ಯವಸ್ಥೆ ಮತ್ತು ವಾಸ್ತವ, ಮಾನವೀಯತೆ, ಮನುಷ್ಯ ಸಂಬಂಧಗಳ ಸಂಘರ್ಷವನ್ನು ತಂದೆ ಮಗಳ ಅಪೂರ್ವ ಸಂಬಂಧದ ಮೇಲೆ ಹೆಣೆದಿರುವುದು ಮನಮಿಡಿಯುವಂತೆ ಮಾಡುತ್ತದೆ.
ಪರದೆ ಮೇಲೆ ಕಥೆ ನೋಡುತ್ತಿದ್ದೇವೆ ಎನ್ನುವುದನ್ನು ಮರೆಸಿ ಸಿನೆಮಾ ತನ್ನೊಳಗೆ ಎಳೆದುಕೊಳ್ಳುತ್ತದೆ. ಅಲ್ಲಲ್ಲಿ ಮನಕಲಕುತ್ತದೆ, ಕಣ್ಣು ಹನಿಗೂಡಿಸುತ್ತದೆ ಗೊತ್ತೇ ಆಗದಂತೆ ಸಿನೆಮಾದ ಅರ್ಧಭಾಗ ಮುಗಿಯುತ್ತದೆ. ನಂತರದಲ್ಲೇ ಇನ್ನೊಬ್ಬ ಖೈದಿಯ ಮಡದಿ-ಮಗುವಿನ ಹಂಬಲಿಸುವಿಕೆ ಸೇರಿದಂತೆ ಕೆಲವೆಡೆ ಸ್ವಲ್ಪ ಕಥೆ ಎಳೆದಂತೆನಿಸುತ್ತದೆ. ಮನುಷ್ಯ ಭಾವನೆಯ ತೀವ್ರತೆಯ ಮೇಲೆ ಸಿನೆಮ್ಯಾಟಿಕ್ ಆಗಿಯೇ ಕಟ್ಟುತ್ತಾ ಹೋಗಿರುವ ಪುಷ್ಪಕ ವಿಮಾನ ಒಂದು ಉತ್ತಮ ಕೃತಿ ಓದಿದ ನಂತರದ ಭಾವಾರ್ಧ್ರತೆ ಮೂಡಿಸುತ್ತದೆ.
ರಮೇಶ್ ಅರವಿಂದ್ ನಾಯಕರಾಗಿರುವ ನೂರನೇ ಚಿತ್ರವಾಗಿ ಪುಷ್ಪಕ ವಿಮಾನವನ್ನು ಅಯ್ಕೆಮಾಡಿಸಿಕೊಂಡಿರುವುದು ಅವರ ಸಜ್ಜನಿಕೆಯ ಸೃಜನಶೀಲ ಮನಸ್ಸಿನ ದ್ಯೂತಕೂ ಆಗಿದೆ. ನೂರರ ನೆನಪಾಗಿ ಹೊಸ ಛಾಪನ್ನು ಅವರ ಅಭಿನಯ ದಾಖಲಿಸುತ್ತದೆ. ಅವರ ಮಗಳಾಗಿ ಯುವಿನ ಪ್ರಾರ್ಥನ ನಟನೆಯಲ್ಲಿ ರಮೇಶ್ ಅವರಷ್ಟೇ ಲವಲವಿಕೆ ಕೊಟ್ಟಿದ್ದಾಳೆ ಇಷ್ಟವಾಗುತ್ತಾಳೆ. ರಚಿತಾರಾಮ್ ಗ್ಲಾಮರಸ್ ನಾಯಕಿಯಾಗಿನೇ ಹೆಚ್ಚು ಇಷ್ಟವಾಗುತ್ತಾರೆನಿಸುತ್ತದೆ ಇಲ್ಲಿ ಪರಾವಾಗಿಲ್ಲ ಪಾತ್ರವನ್ನು ತೂಗಿಸಿದ್ದಾರೆ. ಭುವನ್ ಛಾಯಾಗ್ರಹಣದಲ್ಲಿ ಕಥೆ ಎಳೆಎಳೆಯೂ ಸುಂದರವಾಗಿ ತೆರೆದುಕೊಳ್ಳುತ್ತಾ ಘಾಡತೆಯನ್ನು ಪಡೆದುಕೊಳ್ಳುತ್ತದೆ. ಕತೆಗೆ ಪೂರಕವಾಗಿ ಕೆಲಸ ಮಾಡಿದೆ ಚರಣ್ ರಾಜ್ ಸಂಗೀತ. ಶಾಸ್ತ್ರೀಯ ಮಿಶ್ರಿತ ಸಂಗೀತವನ್ನು ಹೊಡೆದಾಟದ ಹಿನ್ನೆಲೆಗೆ ಬಳಸಿರುವುದು ಹೊಸದಾಗಿಯೂ ಕೇಳಿಸುತ್ತದೆ. ಖೈದಿಗಳಾಗಿರುವ ಮಂಜುನಾಥ್, ಪ್ರದೀಪ್ ಪೂಜಾರಿ, ನಿಶಾಂತ್, ಉಮೇಶ್ ನಟನೆ ಪಾತ್ರಗಳನ್ನು ಗಟ್ಟಿಯಾಗಿಸಿದೆ. ನಿರ್ದೇಶಕ ರವೀಂದ್ರನಾಥ್ ರಮೇಶ್‌ಗೆ ಹೊಂದುವ ಕಥೆ ಆಯ್ಕೆಯಲ್ಲಿ ಗೆದ್ದಿದ್ದಾರೆ.
-ಕೆ.ಬಿ. ಪಂಕಜ

Leave a Comment