ಪಡುವಾರಹಳ್ಳಿ, ಕುಂಬಾರಕೊಪ್ಪಲಿನಲ್ಲೇ ಅಧಿಕ ನೋಟಾ ಚಲಾವಣೆ

ಮೈಸೂರು ಪಾಲಿಕೆ ಚುನಾವಣೆ: ನೋಟಾಕ್ಕೆ 3 ಸಾವಿರಕ್ಕೂ ಅಧಿಕ ಮತ, ಯಾರೂ ಯೋಗ್ಯರಲ್ಲ!
ಮೈಸೂರು: ಸೆ.5- ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದ್ದ `ನೋಟಾ’ಗೆ 3,582 ಮತಗಳು ಬಂದಿವೆ.
ಪಡುವಾರಹಳ್ಳಿ, ಕುಂಬಾರಕೊಪ್ಪಲಿನಲ್ಲಿ ನೂರಕ್ಕೂ ಅಧಿಕ ಜನರು ನೋಟಾಗೆ ಮತ ಚಲಾಯಿಸುವ ಮೂಲಕ ಕಣದಲ್ಲಿರುವ ಅಭ್ಯರ್ಥಿಗಳು ಯಾರೂ ಯೋಗ್ಯರಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಪ್ರಮುಖವಾಗಿ ಸಾಕಷ್ಟು ಕುತೂಹಲಗಳನ್ನು ಕೆರಳಿಸಿದ್ದ ಈ ಹಿಂದೆ ಸಿ.ಮಹದೇಶ್ ಪ್ರತಿನಿಧಿಸಿದ್ದ 22ನೇ ವಾರ್ಡ್ ಪಡುವಾರಹಳ್ಳಿಯಲ್ಲಿ ಕೇವಲ ಇಬ್ಬರೇ ಅಭ್ಯರ್ಥಿಗಳು ಕಣದಲ್ಲಿದ್ದರು. ಸ್ಪರ್ಧೆಯಲ್ಲಿದ್ದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಅಸಿಂಧುವಾಗಿತ್ತು. ಉಳಿದ ಅಭ್ಯರ್ಥಿಗಳೂ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಹೀಗಾಗಿ, ಜೆಡಿಎಸ್‍ನ ನಮ್ರತಾ ರಮೇಶ್ ಹಾಗೂ ಕಾಂಗ್ರೆಸ್‍ನ ಡಿ.ಸುಲೋಚನಾ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
ಇಲ್ಲಿ ಕೇವಲ ಶೇ 46.58ರಷ್ಟು ಮಾತ್ರ ಮತದಾನವಾಗಿತ್ತು. ಅರ್ಧಕ್ಕೂ ಹೆಚ್ಚು ಮಂದಿ ಮತದಾನದಿಂದ ದೂರವೇ ಉಳಿದಿದ್ದರು. ಇದರಲ್ಲಿ 199 ಮಂದಿ ನೋಟಾ ಪರವಾಗಿ ಪತ ಚಲಾಯಿಸುವ ಮೂಲಕ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದೇ ರೀತಿ 5ನೇ ವಾರ್ಡ್ ಕುಂಬಾರಕೊಪ್ಪಲಿನಲ್ಲಿ ಕೇವಲ ನಾಲ್ವರು ಮಾತ್ರ ಕಣದಲ್ಲಿದ್ದರು. ಇಲ್ಲಿ ಶೇ 54.50ರಷ್ಟು ಮಂದಿ ಮತ ಚಲಾಯಿಸಿದ್ದರು. ಇವರಲ್ಲಿ 108 ಮಂದಿ ಎಲ್ಲ ಅಭ್ಯರ್ಥಿಗಳನ್ನು ಸಾರಸಗಟಾಗಿ ತಿರಸ್ಕರಿಸಿದ್ದಾರೆ.
ಉಳಿದಂತೆ, 40ನೇ ವಾರ್ಡ್ ಲಷ್ಕರ್ ಮೊಹಲ್ಲಾ, 62ನೇ ವಾರ್ಡ್ ವಿ.ವಿ.ನಗರ, 44ನೇ ವಾರ್ಡ್ ಜನತಾನಗರ, 48ನೇ ವಾರ್ಡ್ ಜಯನಗರ, 65ನೇ ವಾರ್ಡ್ ಶ್ರೀರಾಂಪುರ, 28ನೇ ವಾರ್ಡ್ ಗಾಂಧಿನಗರ, 54ನೇ ವಾರ್ಡ್ ಗುಂಡೂರಾವ್‍ನಗರಗಳಲ್ಲಿ ತಲಾ 80ಕ್ಕೂ ಅಧಿಕ ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ.
10ಕ್ಕೂ ಕಡಿಮೆ ಮತ ಪಡೆದವರು: 08ನೇ ವಾರ್ಡ್ ಬನ್ನಿಮಂಟಪ ಹುಡ್ಕೋ ಬಡಾವಣೆ ಇಬ್ರಾಹಿಂ ಸೇಠ್ 10, 17ನೇ ವಾರ್ಡ್ ಬನ್ನಿಮಂಟಪ ಆರೀಫಾ ಸುಲ್ತಾನ 7, 51ನೇ ವಾರ್ಡ್ ಅಗ್ರಹಾರದ ಎನ್.ರವಿ 2, ಎಂ.ರಾಘವೇಂದ್ರ 8, ಎಲ್.ರುದ್ರಮೂರ್ತಿ 4 ಮತಗಳನ್ನಷ್ಟೇ ಪಡೆದಿದ್ದಾರೆ.
ಅಗ್ರಹಾರದಲ್ಲಿ ಒಂದೇ ನೋಟಾ!
51ನೇ ವಾರ್ಡ್ ಅಗ್ರಹಾರದಲ್ಲಿ ಕೇವಲ ಒಂದೇ ಒಂದು ಮತ ನೋಟಾಗೆ ಬಂದಿದೆ. ಇಲ್ಲಿ ಶೇ 49ರಷ್ಟು ಮತದಾನವಾಗಿತ್ತು. ಒಟ್ಟು 9 ಮಂದಿ ಕಣದಲ್ಲಿದ್ದರು. ಆದರೆ, ಒಬ್ಬರು ಮಾತ್ರ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.
ಇದನ್ನು ಬಿಟ್ಟರೆ, 8ನೇ ವಾರ್ಡ್ ಬನ್ನಿಮಂಟಪದಲ್ಲಿ 20, 26ನೇ ವಾರ್ಡ್ ಮೀನಾಬಜಾರ್‍ನಲ್ಲಿ 19, 12ನೇ ವಾರ್ಡ್ ಶಾಂತಿನಗರ 13, 13ನೇ ವಾರ್ಡ್ ಉದಯಗಿರಿ 12, 33ನೇ ವಾರ್ಡ್ ಅಜೀಜ್‍ಸೇಠ್ ನಗರ 10 ಮತಗಳಷ್ಟೇ ನೋಟಾಗೆ ಬಿದ್ದಿವೆ.

Leave a Comment