ಪಟಾಕಿ ಬದಲು ಹಣತೆ ಹಚ್ಚಿ ದೀಪಾವಳಿ ಆಚರಿಸಲು ಮನವಿ

ತುಮಕೂರು, ನ. ೮-  ಹಿಂದೂಗಳ ಪವಿತ್ರ ಹಬ್ಬ ದೀಪಾವಳಿಯನ್ನು ಪಟಾಕಿಗೆ ಬದಲು, ದೀಪಗಳನ್ನು ಹಚ್ಚಿ, ಬಣ್ಣದ ರಂಗೋಲಿಗಳನ್ನು ಹಾಕುವ ಮೂಲಕ ಆಚರಿಸಿದರೆ ಹೆಚ್ಚು ಅರ್ಥ ಬರುತ್ತದೆ. ಪಟಾಕಿ ಸಿಡಿದ ನಂತರ ಉಳಿಯುವ ಕಸವನ್ನು ವಿಲೇವಾರಿ ಮಾಡುವುದು ನಗರಪಾಲಿಕೆಗೆ ದೊಡ್ಡ ತಲೆನೋವಾಗಿದೆ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಂಡು ಕಡಿಮೆ ಪಟಾಕಿ ಸಿಡಿಸಿ, ಹೆಚ್ಚು ಹಣತೆಗಳನ್ನು ಹಚ್ಚಿಸುವ ಮೂಲಕ ದೀಪಾವಳಿ ಆಚರಿಸುವಂತೆ 26ನೇ ವಾರ್ಡಿನ ನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಜನತೆಯಲ್ಲಿ ಮನವಿ ಮಾಡಿದರು.

ನಗರದ ಎಸ್‌ಐಟಿ ಬಡಾವಣೆಯ ಜನನಿಬಿಡ ಪ್ರದೇಶಗಳಲ್ಲಿ 26ನೇ ವಾರ್ಡಿನಲ್ಲಿ ಬ್ಲೂಗೆಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪಟಾಕಿ ಸಿಡಿಸುವುದರ ವಿರುದ್ಧ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನನಿಬಿಡ ಪ್ರದೇಶಗಳಲ್ಲಿ ಮೈಕ್ ಹಿಡಿದು ಪಟಾಕಿ ಸಿಡಿಸುವುದರಿಂದಾಗುವ ದುಷ್ಪರಿಣಾಮಗಳ ಕುರಿತು ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ವಿವಿಧ ಬಡಾವಣೆಗಳಲ್ಲಿ ನಡೆಸಿದರು.

ದೇಶದ ಸರ್ವೋಚ್ಚ ನ್ಯಾಯಾಲಯ ಜಾಗತಿಕ ತಾಪಮಾನ ತಡೆಯುವುದು ಮತ್ತು ವಾಯು ಮಾಲಿನ್ಯ ನಿಯಂತ್ರಿಸುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ಸಮಯವನ್ನು ಒಂದು ದಿನದಲ್ಲಿ ಕೇವಲ 2 ಗಂಟೆಗಳ ಅವಧಿಗೆ ನಿಗದಿಗೊಳಿಸಿದೆ. ರಾತ್ರಿ 6 ರಿಂದ 8 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ ಪಟಾಕಿ ಸಿಡಿಸುವುದರಿಂದ ನಾವು ಸೇವಿಸುವ ಗಾಳಿಯಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿ, ಮನುಷ್ಯನ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ ಗಾಳಿಯಲ್ಲಿ ಇಂಗಾಲದ ಡೈಆಕ್ಸೆಡ್ ಹೆಚ್ಚುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಪ್ರಕೃತಿ ವಿಕೋಪ ಸಹ ಹೆಚ್ಚಲಿದೆ. ಅಲ್ಲದೆ ಪಟಾಕಿ ಸಿಡಿದ ನಂತರ ಉಳಿಯುವ ಕಸದ ಸಮರ್ಪಕ ವಿಲೇವಾರಿ ಆಗದೆ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುವುದರಿಂದ ಜನಸಾಮಾನ್ಯರು ಪಟಾಕಿ ಬದಲು ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಿಸುವಂತೆ ಮನವಿ ಮಾಡಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಮುಖಂಡರಾದ ದನಿಯಾಕುಮಾರ್, ಬ್ಲೂಗಲ್ ಟ್ರಸ್ಟ್‌ನ ಎನ್. ರಾಮು, ದಫೇದಾರ್ ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

Leave a Comment