ಪಟಾಕಿ ನಿಷೇಧಕ್ಕೆ ಆಗ್ರಹಿಸಿ ಧರಣಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ.೧೨- ಸಾಂಸ್ಕೃತಿಕ, ಧಾರ್ಮಿಕ, ರಾಷ್ಟ್ರೀಯ ಹಬ್ಬಗಳು ಹಾಗೂ ಚುನಾವಣೆ ಸಂದರ್ಭಗಳಲ್ಲಿ ಪಟಾಕಿ ಬಳಕೆ ನಿಷೇಧಿಸಬೇಕೆಂದು ಆಗ್ರಹಿಸಿ ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೀತಾ ಸಂತೋಷ್ ಕುಮಾರ್ ಪ್ರೆಸ್ ಕ್ಲಬ್ ಮುಂದೆ ಒಂದು ದಿನದ ಸಾಂಕೇತಿಕ ಪ್ರತಿಭಟನಾ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಬೆಳಕಿನಿಂದ ಕತ್ತಲೆಗೆ ಒಯ್ಯುವ ಪಟಾಕಿ ಬಳಕೆಯನ್ನು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ನಿಷೇಧಿಸಬೇಕು. ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುವ ಪಟಾಕಿ ಬಳಕೆಯಿಂದ ಬದುಕು ಕತ್ತಲಾಗಲಿದೆ ಕಾರಣ ಪಟಾಕಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅನ್ವಯ 125 ಡೆಸಿಬಲ್ ಶಬ್ದ ಉಂಟು ಮಾಡುವ ಪಟಾಕಿಗಳ ಬಳಕೆಗೆ ಅನುಮತಿ ಇದೆ. ಆದರೆ ಇಂದು 175 ಡೆಸಿಬಲ್ ವರೆಗೂ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವ ಪಟಾಕಿಗಳನ್ನು ಬಳಸಲಾಗುತ್ತಿದೆ. ಇದರಿಂದ ಶ್ರವಣ ದೋಷ ಉಂಟಾಗಲಿದೆ ಎಂದರು.
ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮತ್ತು ಧಾರ್ಮಿಕ ಪ್ರದೇಶ, ಶಾಲಾ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದರೂ ಉಲ್ಲಂಘಿಸಲಾಗುತ್ತಿದೆ ಎಂದ ಅವರು ಪಟಾಕಿಯಿಂದ ಉಂಟಾಗುವ ವಾಯು ಮಾಲಿನ್ಯದಿಂದ ಮನುಷ್ಯರಲ್ಲಿ ಬಹು ಅಂಗಾಂಗಗಳ ವೈಫಲ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಟಾಕಿ ಬಳಕೆ ನಿಷೇಧವನ್ನು ಕಡ್ಡಾಯವಾಗಿ ದೇಶದಾದ್ಯಂತ ಜಾರಿಗೊಳಿಸಬೇಕಾಗಿ ಒತ್ತಾಯಿಸಿದರು.

Leave a Comment