ಪಕ್ಷ ಸಂಘಟನೆಗೆ ಸಜ್ಜಾಗಿ ಕಾರ್ಯಕರ್ತರಿಗೆ ಜೆಡಿಎಸ್ ಕರೆ

ದಾವಣಗೆರೆ, ಫೆ. 17 – ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ಶಾಸಕ ಮಧುಬಂಗಾರಪ್ಪ ಕರೆ ನೀಡಿದ್ದಾರೆ. ನಗರದ ಚೇತನ ಹೋಟೆಲ್ ಸಭಾಂಗಣದಲ್ಲಿಂದು ನಡೆದ ಕರ್ನಾಟಕ ಪ್ರದೇಶ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಹಾಗೂ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಅಭಿವೃದ್ದಿಯನ್ನು ನಿರ್ಲಕ್ಷಿಸಿದೆ. ಬರ ಆವರಿಸಿದ್ದು ಜನತೆ ಸಂಕಷ್ಟದಲ್ಲಿದ್ದಾರೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು. ಪಕ್ಷದ ರಾಜ್ಯಾದ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಜನತೆ ಮರೆತಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಪಕ್ಷ ಸಂಘಟನೆಗಾಗಿ ಸಜ್ಜಾಗಬೇಕು. ಈಗಾಗಲೇ ವರಿಷ್ಟರ ಸೂಚನೆಯಂತೆ ನಾಲ್ಕು ತಂಡಗಳಲ್ಲಿ ಸಂಘಟನೆಗೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ನಮ್ಮ ತಂದೆ ದಿ.ಬಂಗಾರಪ್ಪ ಅವರಿಗೆ ಐತಿಹಾಸಿಕ ಶಕ್ತಿ ನೀಡಿದ ಸ್ಥಳವಾಗಿದೆ. ಅದಕ್ಕಾಗಿ ಜಿಲ್ಲೆಯ ಬಗ್ಗೆ ಅಭಿಮಾನವಿದೆ. ಜೆಡಿಎಸ್ ಪಕ್ಷ ಅಪ್ಪ ಮಕ್ಕಳ ಪಕ್ಷ ಎಂದು ಹೇಳಲಾಗುತ್ತಿದೆ ಅದು ತಪ್ಪು ಕಲ್ಪನೆ. ನಮ್ಮ ಪಕ್ಷ ರಾಜ್ಯದ ಅಭಿವೃದ್ದಿಗೆ ಆದ್ಯತೆ ನೀಡಲಿದೆ. ಒಟ್ಟಾರೆ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ಅವಶ್ಯಕತೆ ಇದೆ. ಕಾರ್ಯಕರ್ತರು ಯಾವುದೇ ಗೊಂದಲಗಳಿದ್ದರು ಸಹ ಅವುಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಸಂಘಟನೆಯತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.

ಹರಿಹರ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದತ್ತ ಜನರ ಒಲವು ವ್ಯಕ್ತವಾಗುತ್ತಿದೆ.ಮುಂಬರುವ ಚುನಾವಣೆಯಲ್ಲಿ 3 ಕ್ಕಿಂತ ಹೆಚ್ಚು ಸ್ಥಾನ ಜಯಗಳಿಸುವ ಭರವಸೆ ಇದೆ. ರೈತರು ಜೆಡಿಎಸ್ ಪಕ್ಷದ ಬೆನ್ನುಲುಬು. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಅರಿವಿದೆ. ಜನರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಅದಕ್ಕಾಗಿಯೇ ಜನರು ಸಹ ಪಕ್ಷದತ್ತ ಒಲವು ತೋರುತ್ತಿದ್ದಾರೆ.ಆದ್ದರಿಂದ ಕಾರ್ಯಕರ್ತರು ಬೇರು ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಬೇಕಿದೆ ಎಂದರು.

ಶಾಸಕಿ ಶಾರದಾಪೂಱ್ಯನಾಯ್ಕ್ ಮಾತನಾಡಿ, ರಾಜ್ಯದಲ್ಲಿ ಬರ ಆವರಿಸಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕೂಗಿಗೆ ಸ್ಪಂದಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಸಭೆಯಲ್ಲಿ ಬಿ.ಎಂ.ಫಾರೂಕ್, ಬಿ.ಬಿ.ನಿಂಗಯ್ಯ, ಚಿದಾನಂದ್, ಶೀಲಾ ಮತ್ತಿತರರು ಉಪಸ್ಥಿತರಿದ್ದರು.

Leave a Comment