ಪಕ್ಷ ಸಂಘಟನೆಗೆ ಜೆಡಿಎಸ್ ನಿಂದ “ಅರಳೀಕಟ್ಟೆ ಪೇ ಚರ್ಚಾ”

ಬೆಂಗಳೂರು, ಜ  24- ಕಾಡುಹರಟೆಯ ಕಟ್ಟೆ, ಸೋಮಾರಿಗಳ ಕಟ್ಟೆಯೆನಿಸುವ ಅರಳೀಕಟ್ಟೆಯನ್ನು ಜೆಡಿಎಸ್  ಪಕ್ಷ ಸಂಘಟನೆಗಾಗಿ ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳಲು ಮುಂದಾಗಿದೆ.

ಅರಳೀಕಟ್ಟೆ  ಎನ್ನುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹರಟೆ ಹೊಡೆಯುವ ಪಂಚಾಯಿತಿ ಸೇರುವ  ನಿರ್ಣಯಗಳನ್ನು ಕೈಗೊಳ್ಳುವ ಸ್ಥಳ. ಕಷ್ಟಸುಖಗಳನ್ನು ಹಂಚಿಕೊಳ್ಳುವ ರಾಜಕೀಯ ಏಳುಬೀಳು, ಅಭ್ಯರ್ಥಿಗಳ ಸೋಲು- ಗೆಲುವಿನ ಲೆಕ್ಕಚಾರ, ರಾಷ್ಟ್ರ ರಾಜಕೀಯದ ಚರ್ಚೆಗಳಿಗೂ  ಅರಳೀಕಟ್ಟೆಯೇ ತಾಣ‌. ಅರಳೀಕಟ್ಟೆ ರೈತರ ಬಿತ್ತನೆ, ಮಳೆ ಬೆಳೆ ಹೇಗೆ ಎನ್ನುವ ವಿಚಾರ  ವಿನಿಮಯ ಕೇಂದ್ರವೂ‌ ಹೌದು.

ಗ್ರಾಮೀಣ ಭಾಗದ ಜನರೊಂದಿಗೆ ನಂಟುಹೊಂದಿರುವ  ಅರಳೀಕಟ್ಟೆಯಲ್ಲಿ ಜೆಡಿಎಸ್ ಸಂಘಟನೆಯ ಕೇಂದ್ರ ಮಾಡುವಂತೆ ಶಾಸಕಾಂಗ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಬಿಜೆಪಿಯ  ‘ಚಾಯ್ ಪೇ ಚರ್ಚಾ ‘ಪಕ್ಷ ಸಂಘಟನೆಗೆ ಸಹಕಾರಿಯಾಗಿತ್ತು. ಇದೇ ಮಾದರಿಯಲ್ಲಿ ಅರಳಿಕಟ್ಟೆ ಚರ್ಚೆ ನಡೆಸಬೇಕು ಎನ್ನುವ ಯೋಜನೆ ತೆನೆಹೊತ್ತ ಮಹಿಳೆಯದ್ದು.

ಶಕ್ತಿಕುಂದಿರುವ ತೆನೆಹೊತ್ತ ಮಹಿಳೆಯ ಪುಷ್ಠಿಗೆ ತಳಮಟ್ಟದ  ಸಂಘಟನೆ ಅನಿವಾರ್ಯವಿದೆ. ಸಮಾವೇಶ ಸಭೆಗಳಲ್ಲಿ ಕಾರ್ಯಕರ್ತರು ಸೇರುತ್ತಾರಾದರೂ  ಕುಮಾರಸ್ವಾಮಿ ನೀಡಿದ ಜನಪರ ಜನಪ್ರಿಯ ಯೋಜನೆಗಳನ್ನು ಜನರಿಗೆ ಪ್ರಚುರ ಪಡಿಸುವಲ್ಲಿ  ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ಗ್ರಾಮೀಣ ಜನರಲ್ಲಿ ಪಕ್ಷ‌ದ‌ ಬಗ್ಗೆ‌ ಒಲವು  ತೋರಲು ಅರಳಿಕಟ್ಟೆಯಲ್ಲಿ ಗ್ರಾಮದ ಮುಖಂಡರ ಜೊತೆ ಕಾರ್ಯಕರ್ತರು ಪಕ್ಷದ ಮುಖಂಡರು ಊಟ  ಮಾಡಬೇಕು. ಊಟದ ನೆಪದಲ್ಲಿ ಪಕ್ಷದ ಯೋಜನೆಗಳು, ಪಕ್ಷದ ಸಿದ್ಧಾಂತಗಳ ಬಗ್ಗೆ ಅವರೊಂದಿಗೆ  ಚರ್ಚಿಸಬೇಕು. ಪ್ರಮುಖವಾಗಿ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಬಗ್ಗೆ ಅರಿವು ಮೂಡಿಸಿ  ಪಕ್ಷದತ್ತ ಸೆಳೆದು ಸಂಘಟಿಸುವ ಪ್ರಯತ್ನ ಕುಮಾರಸ್ವಾಮಿಯದ್ದಾಗಿದೆ.

ಅರಳೀಕಟ್ಟೆ  ಚರ್ಚೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ? ಕಾರ್ಯಕರ್ತರು ಇತ್ತ  ಆಸಕ್ತರಾಗುತ್ತಾರಾ? ನಿರೀಕ್ಷಿತ ಫಲಿತಾಂಶ ಅರಳೀಕಟ್ಟೆ ನೀಡಬಲ್ಲದೇ ಎನ್ನುವುದನ್ನು ಕಾದು ನೋಡಬೇಕಿದೆ.

Leave a Comment