ಪಕ್ಷ ವಿರೋಧಿ ಸದಸ್ಯರು-ಮುಖಂಡರಿಗೆ ಟಿಕೆಟ್‌ಯಿಲ್ಲ

* ಟಿಕೆಟ್‌ ಕೇಳಿ ಅರ್ಜಿ ಹಾಕುವುದೆ ಬೇಡ-ಯಾಸೀನ್ ಖಡಕ್ ಎಚ್ಚರಿಕೆ

ರಾಯಚೂರು.ಆ.06- ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಮಾಡಿದ ನಾಯಕರು ಮತ್ತು ನಗರಸಭೆ ಸದಸ್ಯರು ಟಿಕೆಟ್‌‌ಗೆ ಅರ್ಜಿ ಹಾಕುವ ಹಕ್ಕು ಕಳೆದುಕೊಂಡಿದ್ದು, ಇಂತಹ ಪಕ್ಷ ವಿರೋಧಿಗಳು ಯಾವುದೇ ಕಾರಣಕ್ಕೆ ಟಿಕೆಟ್ ಕೇಳಿ ಅರ್ಜಿ ಹಾಕಬಾರದೆಂದು ಮಾಜಿ ಶಾಸಕ ಸೈಯದ್ ಯಾಸೀನ್ ಅವರು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ನಗರಸಭೆ ಚುನಾವಣೆಗೆ ಸಂಬಂಧಿಸಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆಯಲಾದ ಸಭೆಗೆ ಆಗಮಿಸಿದ್ದ ವೀಕ್ಷಕರಾದ ಅಲ್ಲಮಪ್ರಭು ಅವರನ್ನು ಭೇಟಿಯಾಗಿ ಸುಧೀರ್ಘ ಚರ್ಚೆ ನಡೆಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಚುನಾವಣಾ ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರು ಮತ್ತು ಹಾಲಿ ನಗರಸಭೆ ಸದಸ್ಯರಿಗೆ ಟಿಕೆಟ್ ನಿರಾಕರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

35 ವಾರ್ಡ್‌ಗಳಲ್ಲಿ ಯಾರು ತಮ್ಮ ಪರ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೇ? ಮತ್ಯಾರು ವಿರೋಧಿಸಿದ್ದಾರೆ? ಎನ್ನುವುದು ಸ್ಪಷ್ಟ ಮಾಹಿತಿಯಿದೆ. ಆಯಾ ವಾರ್ಡಿನ ಮತದಾರರೆ ಕಾಂಗ್ರೆಸ್ ಮುಖಂಡರು, ನಗರಸಭೆ ಸದಸ್ಯರು ಚುನಾವಣೆಯಲ್ಲಿ ಯಾರ ಪರ ಪ್ರಚಾರ ಮಾಡಿದ್ದಾರೆಂದು ಮಾಹಿತಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಮುಖಂಡರಿಗೆ ಮತ್ತು ನಗರಸಭೆ ಸದಸ್ಯರಿಗೆ ಟಿಕೆಟ್ ನೀಡಿದರೆ, ನಿಷ್ಠಾವಂತರನ್ನು ಕಡೆಗಣಿಸಿದಂತಾಗುತ್ತದೆಂದು ಅಲ್ಲಮಪ್ರಭು ಪಾಟೀಲ್ ಅವರ ಗಮನ ಸೆಳೆದರು.

ಪಕ್ಷ ವಿರೋಧಿಗಳ ವಿರುದ್ಧ ಕಠಿಣವಾಗಿ ವರ್ತಿಸದಿದ್ದರೆ, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಮೇಲೆ ಭಾರೀ ಕೆಟ್ಟ ಪರಿಣಾಮ ಉಂಟಾಗಲಿದೆಂದು ಎಚ್ಚರಿಸಿದ ಅವರು, ಯಾವುದೇ ಕಾರಣಕ್ಕೂ ನನ್ನ ವಿರುದ್ಧ ಚುನಾವಣೆ ಮಾಡಿದವರಿಗೆ ಟಿಕೆಟ್ ನೀಡಲು ಪ್ರೋತ್ಸಾಹಿಸದಿರುವಂತೆ ಮನವಿ ಮಾಡಿದರು. ನಗರ ರಾಜಕೀಯದಲ್ಲಿ ಇತರೆ ನಾಯಕರ ಹಸ್ತಕ್ಷೇಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಹಸ್ತಕ್ಷೇಪ ಮತ್ತು ಬೆಂಬಲ ಮಧ್ಯೆ ಭಾರೀ ವ್ಯತ್ಯಾಸವಿದೆ.

ನಗರದಲ್ಲಿ ಪಕ್ಷ ಸಂಘಟನೆಗೆ ಬೆಂಬಲಿಸುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ರಾಜಕೀಯ ಹಸ್ತಕ್ಷೇಪ ಸರಿಯಲ್ಲ. ನಗರಸಭೆ ಟಿಕೆಟ್ ಹಂಚಿಕೆ ಅಧಿಕಾರ ಹಾಲಿ ಮತ್ತು ಮಾಜಿ ಶಾಸಕರ ನಿರ್ಣಯಕ್ಕೆ ಬಿಡುವಂತಾಗಬೇಕು. ಇತರೆ ನಾಯಕರೊಂದಿಗೆ ಚರ್ಚಿಸಿ ಎಲ್ಲಾರ ವಿಶ್ವಾಸದೊಂದಿಗೆ ಗೆಲ್ಲುವ ಅಭ್ಯರ್ಥಿ ಗುರುತಿಸುವ ಜವಾಬ್ದಾರಿ ನಾನು ನಿರ್ವಹಿಸುತ್ತೇನೆ. ನಗರಸಭೆ ಚುನಾವಣೆ ಸೈಯದ್ ಯಾಸೀನ್ ಅವರ ಚುನಾವಣೆಯಲ್ಲ. ಇದು ಕಾರ್ಯಕರ್ತರ ಚುನಾವಣೆಯಾಗಿದೆ.
ಮಾಜಿ ಶಾಸಕ ಸೈಯದ್ ಯಾಸೀನ್ ವ್ಯಕ್ತಿ, ಸಂಸದ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಇವರ ವ್ಯಕ್ತಿಗಳೆಂದು ವಿಂಗಡಿಸಿ ವಿರೋಧ ಮಾಡುವುದನ್ನು ಬಿಟ್ಟು ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ವಿಶಾಲ ದೃಷ್ಠಿಯೊಂದಿಗೆ ಚುನಾವಣೆ ನಿರ್ವಹಿಸುವ ಅಗತ್ಯವಿದೆ. ಈ ದಿಕ್ಕಿನಲ್ಲಿ ನಾನು ಎಲ್ಲಾರೊಂದಿಗೆ ಸೇರಿ ಅವರ ವಿಶ್ವಾಸದೊಂದಿಗೆ ಅತಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ನಗರಸಭೆ ಅಧಿಕಾರ ಚುಕ್ಕಾಣಿ ಶತಾಯ-ಗತಾಯ ಹಿಡಿಯುವುದಾಗಿ ಅಲ್ಲಮಪ್ರಭು ಪಾಟೀಲ್ ಅವರಿಗೆ ಭರವಸೆ ನೀಡಿದರು.

ಕಳೆದ ಐದು ವರ್ಷಗಳಲ್ಲಿ ನಗರದ ರಸ್ತೆ ಹಾಳಾಗಿವೆ. ಕುಡಿವ ನೀರು ಕಲುಷಿತಗೊಂಡಿವೆ. ಘನತ್ಯಾಜ್ಯ ವಿಲೇವಾರಿ ಅಸ್ತವ್ಯಸ್ತವಾಗಿದೆ. ಈ ಎಲ್ಲಾವನ್ನು ಸರಿಪಡಿಸುವ ಮೂಲಕ ನಗರದ ಸಮಗ್ರಾಭಿವೃದ್ಧಿಯ ದೃಷ್ಠಿಕೋನದೊಂದಿಗೆ ಮುಂದಿನ ಕಾರ್ಯ ಕೈಗೊಳ್ಳಬೇಕಾಗಿದೆಂದು ಹೇಳಿದರು. ಅಲ್ಲದೆ, ಸಭೆಯಲ್ಲಿ ಮಾತನಾಡಿದ ಸೈಯದ್ ಯಾಸೀನ್ ಅವರು, ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ಸಿನವರು ಯಾಱ್ಯಾರು ಪ್ರಚಾರ ಮಾಡಿದ್ದಾರೆ ಎನ್ನುವ ಮಾಹಿತಿ ಸ್ವತಃ ಪಕ್ಷೇತರ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಗಳು ಪಟ್ಟಿ ನೀಡಿದ್ದಾರೆಂದು ಹೇಳಿದರು.

ಒಟ್ಟಾರೆಯಾಗಿ ನಗರಸಭೆ ಚುನಾವಣೆಗೆ ಸಂಬಂಧಿಸಿ ಟಿಕೆಟ್ ಹಂಚಿಕೆಯಲ್ಲಿ ತಮ್ಮನ್ನು ಪರಿಗಣಿಸಬೇಕು ಎನ್ನುವ ವಿಷಯ ವೀಕ್ಷಕರ ಮುಂದಿಟ್ಟ ಯಾಸೀನ್ ಅವರು, ಯಾವುದೇ ಕಾರಣಕ್ಕೂ ತಮ್ಮ ವಿರೋಧಿಗಳಿಗೆ ಟಿಕೆಟ್ ದೊರೆಯದಂತೆ ಮಾಡುವ ಶತಾಯ-ಗತಾಶ ಪ್ರಯತ್ನಕ್ಕಿಳಿದಿದ್ದಾರೆನ್ನುವುದು ನಿನ್ನೆ ಅಲ್ಲಮಪ್ರಭು ಪಾಟೀಲ್ ಅವರ ಚರ್ಚೆಯಿಂದ ಬಹಿರಂಗಗೊಂಡಿದೆ.

Leave a Comment