ಪಕ್ಷಿಗಳ ವಲಸೆ ಕೊಕ್ಕಿನಲ್ಲೇ ಗೂಗಲ್ ಮ್ಯಾಪ್

  • ಉತ್ತನೂರು ವೆಂಕಟೇಶ್

ವಲಸೆ ಹೋಗುವ ಪಕ್ಷಿಗಳಿಗೆ ತಾವು ತಲುಪಬೇಕಾದ ನಿರ್ದಿಷ್ಟ ಜಾಗಕ್ಕೆ ಹೋಗಲು ಮತ್ತು ಅಲ್ಲಿಂದ ಮತ್ತೆ ತಮ್ಮ ಹಿಂದಿನ ಸ್ಥಳಕ್ಕೆ ಹಿಂದಿರುಗಲು ದಾರಿಯ ಗುರುತು ಹಾಗೂ ಹಿಂದಿರುಗುವಾಗ ಹಿಂದಿನ ತಮ್ಮ ಸ್ಥಳದ ಜ್ಞಾಪಕ ಹೇಗೆ ಇರುತ್ತದೆ?

ಋತುಮಾನಗಳು ಬದಲಾದಂತೆ, ಪಕ್ಷಿಗಳ ತಮಗೆ ಅಹಿತವೆನಿಸುವ ಭಾಗಗಳಿಂದ ಹಿತವೆನಿಸುವ ಪ್ರದೇಶಗಳಿಗೆ ವಲಸೆ ಹೋಗುತ್ತವೆ.

ಆಹಾರಕ್ಕಾಗಿ, ಸಂತಾನೋತ್ಪತ್ತಿಗಾಗಿ ಅನುಕೂಲಕರ, ಹಿತಕರ ವಾತಾವರಣಕ್ಕಾಗಿಯೇ ಪಕ್ಷಿಗಳು ದೇಶದಿಂದ ದೇಶಕ್ಕೆ, ಖಂಡದಿಂದ ಖಂಡಕ್ಕೆ ವಲಸೆ ಹೋಗುತ್ತವೆ.

ರಂಗನತಿಟ್ಟುನಂತಹ ಪಕ್ಷಿಧಾಮಗಳಿಗೆ ನಿರ್ದಿಷ್ಟ ಅವಧಿಯಲ್ಲಿ ವಲಸೆ ಬಂದಿರುವ ವಿದೇಶಿ ಪಕ್ಷಿಗಳನ್ನು ಕಂಡಾಗ, ಇವು ಹೇಗೆ ಅಷ್ಟು ದೂರದಿಂದ ಬಂದವು ಮತ್ತು ಹೇಗೆ ಮತ್ತೆ ತಮ್ಮ ದೇಶಕ್ಕೇ ಹೋಗುತ್ತವೆ ಎಂಬ ಕುತೂಹಲ ನಮ್ಮಲ್ಲಿ ಮೂಡುತ್ತದೆ.

ಹವಾಮಾನ ಬದಲಾಗುತ್ತಿರುವುದು ಮತ್ತು ಬದಲಾಗುವ ಋತುಮಾನ ತಮಗೆ ಅನುಕೂಲಕರವಾಗಿರುವುದಿಲ್ಲ ಎಂಬುದು ಅದಕ್ಕೆ ಹೇಗೆ ಗೊತ್ತಾಗುತ್ತದೆ ಎಂಬ ಕುತೂಹಲ ವಲಸೆ ಹೋಗುತ್ತಿರುವ ಹಕ್ಕಿಗಳ ಸಾಲುಗಳನ್ನು ಮತ್ತು ಪಕ್ಷಿಧಾಮಗಳಿಗೆ ಆಗಮಿಸಿರುವ ಹಕ್ಕಿಗಳನ್ನು ನೋಡಿದವರಿಗೆ ಸಹಜವಾಗಿ ಕುತೂಹಲ ಮೂಡುತ್ತದೆ.

17vichara2

ಈ ಕುತೂಹಲ ಕೇವಲ ಸಾಮಾನ್ಯ ಜನರಲ್ಲಿಯಷ್ಟೇ ಅಲ್ಲ ಪಕ್ಷಿ ತಜ್ಞರು, ಪಕ್ಷಿ ವಿಜ್ಞಾನಿಗಳನ್ನು ಕಾಡಿದೆ.

ವಲಸೆ ಹೋಗುವ ಪಕ್ಷಿಗಳನ್ನು ಮತ್ತು ಅವು ಹೋಗುವ ಜಾಡನ್ನು ಅಧ್ಯಯನ ಮಾಡಿರುವ ವಿಜ್ಞಾನಿಗಳ ತಂಡಗಳು ಅವುಗಳ ಜ್ಞಾಪಕಶಕ್ತಿ ಮತ್ತು ಅವುಗಳಿಗೆ ಬಂದು ಹೋಗುವ ಹಾದಿಯ ಗುರುತು ಹೇಗೆ ಎಂಬುದರ ಬಗ್ಗೆ ಹಲವು ರೀತಿಯ ವೈಜ್ಞಾನಿಕ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ದೇಶದಿಂದ ದೇಶಕ್ಕೆ, ಖಂಡದಿಂದ ಇನ್ನೊಂದು ಖಂಡಕ್ಕೆ ಬಹುದೂರ ವಲಸೆ ಹೋಗುವ ಪಕ್ಷಿಗಳಿಗೆ, ತಾವಿರುವ ಇರುವ ಸ್ಥಳ. ಹೋಗಬೇಕಾದ ಸ್ಥಳ, ಅದನ್ನು ತಲುಪಬೇಕಾದರೆ ಸಾಗಬೇಕಾದ ದಿಕ್ಕು ಮತ್ತು ಮಾರ್ಗ ತಿಳಿದಿರಬೇಕು.

ಈ ತಿಳುವಳಿಕೆಗಾಗಿ ಪಕ್ಷಿಗಳು ತಮ್ಮ ದಿಕ್ಕನ್ನು ನಿರ್ಧರಿಸಲು ಸೂರ್ಯ ಮತ್ತು ನಕ್ಷತ್ರಗಳನ್ನು ಬಳಸಿಕೊಳ್ಳುತ್ತವೆ. ಹಾರುವ ಹಾದಿಯನ್ನು ಜ್ಞಾಪಕವನ್ನು ಇಟ್ಟುಕೊಳ್ಳಲು ತಾವು ಹೋಗುವ ಹಾದಿಯಲ್ಲಿ ಕಾಣುವ ಪರ್ವತಗಳು, ನದಿ, ಸಮುದ್ರ, ಸಾಗರ ಇತ್ಯಾದಿಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತವೆ ಎಂದು ಕೆಲವು ವಿಜ್ಞಾನಿಗಳು ಅಭಿಪ್ರಾಯಪಟ್ಟರೆ, ಇನ್ನು ಕೆಲವರ ಪ್ರಕಾರ ಹಕ್ಕಿಗಳು ಭೂ ಆಯಸ್ಕಾಂತೀಯ ವಲಯವನ್ನು ಗ್ರಹಿಸಬಲ್ಲವು. ಈ ಗ್ರಹಿಕೆಯ ಸಾಮರ್ಥ್ಯಕ್ಕೆ ಅವುಗಳ ಕೊಕ್ಕಿನಲ್ಲಿ ಕಾಳು ರೂಪದಲ್ಲಿರುವ ಮ್ಯಾಗ್ನಟಿಕ್ ಖನಿಜದ ಹರಳುಗಳು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಬ್ಬಿಣ ಅಂಶದಿಂದ ಕೂಡಿರುವ ಈ ಖನಿಜದ ಹರಳುಗಳು ಮ್ಯಾಗ್ನಟಿಕ್ ಕಂಪಾಸ್ ಆಗಿ ಕಾರ್ಯನಿರ್ವಹಿಸುತ್ತವೆ.

ವಿಜ್ಞಾನಿಗಳ ಇನ್ನೊಂದು ಅಭಿಪ್ರಾಯದಂತೆ, ಪಕ್ಷಿಗಳು ಭೂಮಿಯ ಆಯಸ್ಕಾಂತೀಯ ವಲಯವನ್ನು ತಮ್ಮ ಕಣ್ಣುಗಳಲ್ಲಿಯೆ ಕಾಣುವಷ್ಟು ಕಣ್ಣುಗಳ ರಚನಾಕ್ರಮ ಹೊಂದಿರುತ್ತವೆ.

ಈ ವೈಜ್ಞಾನಿಕ ಅಭಿಪ್ರಾಯಗಳು ಏನೇ ಇರಲಿ ವರ್ಷದಲ್ಲಿಯ ಋತುಮಾನಗಳಿಗೆ ಅನುಸಾರ ಒಂದು ಬಾರಿ, ಕೆಲವು ಪಕ್ಷಿಗಳು ಎರಡು ಬಾರಿ ದೂರ ದೂರದ ಪ್ರವೇಶಗಳಿಗೆ ವಲಸೆ ಹೋಗಿ ನಿರ್ದಿಷ್ಟ ಅವಧಿಯವರೆಗೆ ಅಲ್ಲೆ ಇದ್ದು, ಸಂತಾನೋತ್ಪತ್ತಿ ಮಾಡಿಕೊಂಡು ಮೂಲ ಸ್ಥಳಗಳಿಗೆ ಮರಳುವ ಪಕ್ಷಿಗಳ ಸ್ಮರಣಶಕ್ತಿಗೆ ನಾವೆಲ್ಲ ತಲೆದೂಗಲೇಬೇಕು.

Leave a Comment