ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಮಲ್ಲಿಕಾರ್ಜುನ‌ ಖರ್ಗೆಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು, ಜ‌.  27- ಕಾಂಗ್ರೆಸ್ ನಾಯಕತ್ವದ ಗೊಂದಲಕ್ಕೆ ಹೊಸ ತಿರುವು ಸಿಗುವ ಲಕ್ಷಣ  ಕಾಣಿಸಿದೆ. ಮೂಲ ವಲಸೆ ಎಂದು ಕಿತ್ತಾಡುತ್ತಿದ್ದವರೀಗ ಒಂದಾಗುವಂತೆ ಕಾಣುತ್ತಿದೆ.

ಮಾಜಿ ಸಂಸದ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿರುವ ವಿಪಕ್ಷ ಸಿದ್ದರಾಮಯ್ಯ ಇದಕ್ಕಾಗಿ ಷರತ್ತು ಬದ್ಧ ಸಹಮತ ವ್ಯಕ್ತಪಡಿಸಿದ್ದಾರೆ.

ಭಾನುವಾರ ಚಹ ಕುಡಿಯುವ ನೆಪದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಕೂತು ಪಕ್ಷದ ಕುರಿತು ಚರ್ಚೆ ನಡೆಸಿದ್ದಾರೆ.

ರಾಜ್ಯ  ಕಾಂಗ್ರೆಸ್‍ನಲ್ಲಿ ನಾಯಕತ್ವಕ್ಕಾಗಿ ಎರಡೂ ಬಣಗಳ ಪ್ರತಿಷ್ಠೆ ಹೆಚ್ಚಾಗಿರುವುದರಿಂದ  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದ ಎರಡೂ ಬಣಗಳ ನಾಯಕರ ಜೊತೆ ಚರ್ಚಿಸಿ ಒಂದು  ತೀರ್ಮಾನಕ್ಕೆ ಬರುವಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಸೂಚಿಸಿದ್ದರಿಂದ  ಮಲ್ಲಿಕಾರ್ಜುನ ಖರ್ಗೆ,  ಸಿದ್ದರಾಮಯ್ಯ ಅವರೊಂದಿಗೆ ಖಾಸಗಿ ಹೊಟೇಲ್‍ಗೆ ತೆರಳಿ  ಅವರೊಂದಿಗೆ ಪಕ್ಷದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಪಕ್ಷದ  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪಕ್ಷದ ಸಾರಥ್ಯ ವಹಿಸಿಕೊಳ್ಳುವಂತೆ ಹಿರಿಯ  ನಾಯಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಹಾಗೂ  ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿರುವುದರಿಂದ ಅದನ್ನು  ಕಡಿಮೆ ಮಾಡಲು ಖರ್ಗೆಯವರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.

ಒಂದು  ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ  ಸ್ಥಾನ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಎಸ್.ಎಸ್.  ಮಲ್ಲಿಕಾರ್ಜುನ ಅವರಿಗೆ ನೀಡುವ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎಂದು  ಹೇಳಲಾಗುತ್ತಿದೆ.

ದಿನೇಶ್ ಗುಂಡೂರಾವ್‍ಗೆ ಹೈಕಮಾಂಡ್ ಭೇಟಿಯಾಗುವಂತೆ ಹೇಳುವ ಸಾಧ್ಯತೆ ಇದೆ .

ಚರ್ಚೆಯಲ್ಲಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಖರ್ಗೆಯವರಿಗೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದು ,

ಕೆಪಿಸಿಸಿ  ಅಧ್ಯಕ್ಷ ಸ್ಥಾನವನ್ನು ಅವರು ವಹಿಸಿಕೊಂಡರೆ, ತಾವು ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ  ಪಕ್ಷದ ನಾಯಕನ ಎರಡೂ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಬೇಕು. ಎರಡೂ ಹುದ್ದೆ  ವಿಭಜನೆ ಮಾಡುವುದಾದರೆ ಯಾವುದೇ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು  ಸಂದೇಶ  ರವಾನಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಲಿಂಗಾಯತ ಸಮುದಾಯದವರಿಗೆ ಕೆಪಿಸಿಸಿ  ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ, ಆ ಸಮುದಾಯದ ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ.  ಡಿ.ಕೆ.ಶಿವಕುಮಾರ್ ಹಾಗೂ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ  ಹುದ್ದೆಗೆ ಪರಿಗಣಿಸಬಹುದು. ಖರ್ಗೆಯವರಿಗೆ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನ  ವಹಿಸಿಕೊಂಡರೆ, ಅಹಿಂದ‌ ಮತಗಳನ್ನು ಪಕ್ಷದತ್ತ ಸೆಳೆಯಲು ಅನುಕೂಲವಾಗುತ್ತದೆ. ತಮ್ಮ  ಹಿರಿತನಕ್ಕೆ ಪಕ್ಷದಲ್ಲಿ ಉತ್ತಮ ಅವಕಾಶ ದೊರೆಯುವುದಾದರೆ  ಬೆಂಬಲವಿದೆ ಎಂದಿದ್ದಾರೆ.

ಕೆಪಿಸಿಸಿ  ಅಧ್ಯಕ್ಷ ಸ್ಥಾನಕ್ಕೆ ಜೈಲಿಗೆ ಹೋಗಿ ಬಂದವರು ಎಂದು ಯಡಿಯೂರಪ್ಪರಂತೆ ಶಿವಕುಮಾರ್ ಪಟ್ಟ  ಹೊತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದಾಗ ಅವರ ವಿರುದ್ಧ ಜೈಲಿಗೆ ಹೋದವರು ಎಂದು  ಆರೋಪ ಮಾಡಿದ್ದು, ಈಗ ನಮ್ಮ ಪಕ್ಷದಲ್ಲಿ ಜೈಲಿಗೆ ಹೋಗಿ ಬಂದವರನ್ನು ಅಧ್ಯಕ್ಷರನ್ನಾಗಿ  ಮಾಡಿದರೆ, ಅವರನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು  ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆಯಾದರೂ ಇದಕ್ಕೆ ಖರ್ಗೆ ಯಾವುದೇ ಉತ್ತರ  ನೀಡಿಲ್ಲ.

ಸಿದ್ದರಾಮಯ್ಯ ಅವರಂತೆ ಎಐಸಿಸಿ ಸೂಚನೆ ಮೇರೆಗೆ  ಮಲ್ಲಿಕಾರ್ಜುನ ಖರ್ಗೆ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Leave a Comment