ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗಿದ್ದು ನಿಜ: ಫಿಂಚ್‌

ಟಾಂಟನ್‌, ಜೂ 13- ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಿಣುಕಾಡಿ ಗೆಲುವು ಸಾಧಿಸಿದ ಬಗ್ಗೆ ನಾಯಕ ಆ್ಯರೋನ್‌ ಫಿಂಚ್‌ ಹೇಳಿಕೊಂಡಿದ್ದಾರೆ.

ಇಲ್ಲಿನ ಕೌಂಟಿ ಅಂಗಳದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 307 ರನ್‌ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಗುರಿ ಬೆನ್ನತ್ತಿದ್ದ ಪಾಕಿಸ್ತಾನ 266 ರನ್‌ ದಾಖಲಿಸಿತ್ತು. ಅಂತಿಮವಾಗಿ ಪಾಕ್‌ 41ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಒಂದು ಹಂತದಲ್ಲಿ ಆರು ವಿಕೆಟ್‌ ಕಳೆದುಕೊಂಡು160 ರನ್‌ ದಾಖಲಿಸಿತ್ತು. ನಂತರ, ಪುಟಿದೆದ್ದ ಪಾಕಿಸ್ತಾನ ಏಳು ವಿಕೆಟ್‌ಗೆ 264 ರನ್‌ ಗಳಿಸಿತ್ತು. ಈ ನಡುವೆ ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ಹಸನ್‌ ಅಲಿ 15 ಎಸೆತಗಳಲ್ಲಿ 32 ರನ್‌, ವಹಾಬ್‌ ರಿಯಾಜ್‌ 39 ಎಸೆತಗಳಲ್ಲಿ 45 ರನ್‌ ಹಾಗೂ ನಾಯಕ ಸರ್ಫರಾಜ್‌ ಅಹಮದ್‌ 48 ಎಸೆತಗಳಲ್ಲಿ 40 ರನ್‌ ಸಿಡಿಸಿದ್ದರು. ಈ ಹಂತದಲ್ಲಿ ಆಸೀಸ್‌ಗೆ ಸೋಲಿನ ಭೀತಿ ಎದುರಾಗಿತ್ತು. ಈ ವೇಳೆ ತನ್ನ 9 ಓವರ್‌ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ ಮಿಚೆಕ್‌ ಸ್ಟಾರ್ಕ್‌ ಎರಡು ವಿಕೆಟ್‌ ಕಿತ್ತು ಆಸೀಸ್‌ ಗೆಲುವಿನ ತೋರಣ ಕಟ್ಟಿದರು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಯಿಸಿದ ನಾಯಕ ಫಿಂಚ್‌, ” ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಹಾಬ್‌ ಹಾಗೂ ಹಸನ್‌ ಅವರು ಅದ್ಭುತ ಬ್ಯಾಟಿಂಗ್‌ ಮಾಡಿದ್ದರು. ಇದರಿಂದ ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆವು. ಒಂದು ಹಂತದಲ್ಲಿ ಅವರನ್ನು ನಿಯಂತ್ರಿಸುವುದು ಕಷ್ಟವಾಯಿತು. ಆದರೂ ಯಶಸ್ವಿಯಾದೆವು” ಎಂದು ಹೇಳಿಕೊಂಡಿದ್ದಾರೆ.

” ಪಾಕ್‌ ಒಮ್ಮೆ ಉತ್ತಮ ಆರಂಭ ಪಡೆದರೆ ಅವರನ್ನು ನಿಯಂತ್ರಿಸಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ, ಯಾರ್ಕರ್‌, ಲೆನ್ತ್‌ ಎಸೆತ ಸೇರಿದಂತೆ ಅತ್ಯುತ್ತಮ ಎಸೆತಗಳನ್ನು ಪ್ರಯೋಗ ಮಾಡಿದೆವು. ಶೇ 100 ರಷ್ಟು ಆತ್ಮವಿಶ್ವಾಸದೊಂದಿಗೆ ಬೌಲಿಂಗ್‌ ಮಾಡಲೇಬೇಕು. ಇಲ್ಲವಾದಲ್ಲಿ ಚಿಕ್ಕ ಅಂಗಳವಾಗಿರುವುದರಿಂದ ಸಿಕ್ಸ್‌ ಹೊಡೆಸಿಕೊಳ್ಳುವುದು ಗ್ಯಾರೆಂಟಿ. ಹಾಗಾಗಿ, ಸಾಕಷ್ಟು ವಿಶ್ವಾಸದೊಂದಿಗೆ ಬೌಲಿಂಗ್‌ ಮಾಡುವುದು ಪಂದ್ಯದಲ್ಲಿ ಅಗತ್ಯವಾಗಿತ್ತು” ಎಂದರು.

” ಮೊದಲು ಬ್ಯಾಟಿಂಗ್‌ ಮಾಡಿದ್ದ ನಾವು ನಿಗದಿತ 50 ಓವರ್‌ಗಳನ್ನು ಪೂರ್ಣಗೊಳಿಸಲಿಲ್ಲ. ಇದು ಹೆಚ್ಚು ನಿರಾಸೆ ಮೂಡಿಸಿತು. ಆರಂಭದಲ್ಲಿ  ಉತ್ತಮ ರನ್‌ ಕಲೆಹಾಕಿದ್ದೆವು. ಆದರೆ, ಕೊನೆಯ ಹಂತದಲ್ಲಿ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, 20 ರಿಂದ 30 ರನ್‌ ನಮಗೆ ಕಡಿಮೆಯಾಯಿತು ಎಂದು ಫಿಂಚ್ ಹೇಳಿದರು.

Leave a Comment