ಪಂಚಾಂಗ ಕಾಲವನ್ನು ವಿಭಜಿಸುತ್ತದೆ

ಚಿತ್ರದುರ್ಗ.ಜ.6; ಪಂಚಾಂಗದ ಮೂಲಕ ನಡೆಯುವ ಬಹುತೇಕ ಮದುವೆಗಳು ವೆಚ್ಚಕ್ಕೆ ಕಾರಣವಾಗುತ್ತವೆ. ಪಂಚಾಂಗ ಕಾಲವನ್ನು ವಿಭಜಿಸುತ್ತದೆ. ಇಂದು ಶ್ರೀಮಠದಲ್ಲಿ ಅಮಾವಾಸ್ಯೆಯ ಅಮಂಗಲವನ್ನು ನಿವಾರಿಸಿ ಮಾಂಗಲ್ಯ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೊಂಬತ್ತನೇ ವರ್ಷದ ಮೊದಲನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಮಾನವ ಬದುಕಿನಲ್ಲಿ ಅತ್ಯಂತ ಪ್ರಮುಖವಾಗಿರುವ ಕಾರ್ಯವೆಂದರೆ ಸಂಬಂಧಗಳನ್ನು ಬೆಳೆಸುವುದು. ಜಾತಿ ಜಾತಿಗಳ ನಡುವೆ, ಕುಟುಂಬ ಕುಟುಂಬಗಳ ನಡುವೆ ಮಾನವ ಸಂಬಂಧಗಳನ್ನು ಬೆಸೆಯುವುದಾಗಬೇಕು. ಶ್ರೀಮಠವು ಸರಳ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಶ್ರೀಮಠದಲ್ಲಿ ಜಾತಿ ಧರ್ಮಗಳ ಗೋಡೆಗಳಿಲ್ಲದೆ ಸರ್ವ ಜನಾಂಗದವರನ್ನು ಕೂಡಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ ಎಂದರು.
ಗೌರವ ಉಪಸ್ಥಿತಿ ವಹಿಸಿದ್ದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ, ಮದುವೆ ಎನ್ನುವಂಥದ್ದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವವಾದುದು. ಸತಿ ಪತಿಗಳು ಪರಸ್ಪರ ಹೊಂದಾಣಿಕೆಯ ಮೂಲಕ ತಮ್ಮ ವೈವಾಹಿಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಮಠಗಳು ಪ್ರಸ್ತುತ ದಿನಗಳಲ್ಲಿ ಜೀವಪರವಾಗಿ ವಿಧಾಯಕ ಕಾರ್ಯಗಳನ್ನು ಹೇಗೆ ಮಾಡಬೇಕು ಎಂಬುದಕ್ಕೆ ಶ್ರೀಮಠ ಮೇಲ್ಪಂಕ್ತಿಯಾಗಿದೆ. ಎಲ್ಲಾ ಆದರ್ಶಗಳಿಗೆ ಶ್ರೀಮಠವು ತಾಯಿ ಬೇರಾಗಿದೆ ಎಂದು ತಿಳಿಸಿದರು.
ಮುಖ್ಯಅತಿಥಿ ಭೋಜನಾಯ್ಕ ಮಾತನಾಡಿ, ಬಸವಣ್ಣನವರು ಎಲ್ಲ ಜನಾಂಗದವರನ್ನು ಒಂದೆಡೆ ಸೇರಿಸಿ ಅನುಭವ ಮಂಟಪವನ್ನು ಕಟ್ಟಿ ಸಮಸಮಾಜಕ್ಕಾಗಿ ಶ್ರಮಿಸಿದರು. ಅದರಂತೆ ಮುರುಘಾ ಶರಣರು ಈ ಅನುಭವ ಮಂಟಪದ ಮೂಲಕ ಸರಳ ವಿವಾಹಗಳನ್ನು ನಡೆಸುವುದರ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪುರೋಹಿತರ ಮಂತ್ರ ಘೋಷಣೆಗಳಿಲ್ಲದೆ, ಅಮಾವಾಸ್ಯೆ, ಹುಣಿ ್ಣಮೆ ಇರಲಿ ಪ್ರತಿ ತಿಂಗಳು 5ನೇ ತಾರೀಕಿನಂದು ಸಾಮೂಹಿಕ ಕಾರ್ಯಕ್ರಮ ನಡೆಸುತ್ತ ಬಂದಿರುವುದು ಅಭಿನಂದನೀಯ ಎಂದರು.
ಇನ್ನೋರ್ವ ಅತಿಥಿ ಕೇಶವರೆಡ್ಡಿ ಮಾತನಾಡಿ, ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸುವುದೇ ಆನಂದ. ನೂರಾರು ಕೋಟಿ ವೆಚ್ಚ ಮಾಡಿ ಮದುವೆಗಳನ್ನು ಮಾಡುತ್ತಾರೆ. ಆದರೆ ಅಲ್ಲಿ ಸಂತೋಷವೇ ಇರುವುದಿಲ್ಲ. ಇಂಥ ಮಠಗಳಲ್ಲಿ ನಡೆಯುವ ಸರಳ ವಿವಾಹಗಳು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಇದೇ ಸಂದರ್ಭದಲ್ಲಿ 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮಾವಾಸ್ಯೆಯ ಸಂದರ್ಭದಲ್ಲಿ ಮದುವೆಯಾದ ವಧುವರರಿಗೆ ತಾಳಿ, ಬಟ್ಟೆಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮ ದಾಸೋಹಿಗಳಾದ ಎಂ.ಸಿ.ಕೆ.ಎಸ್. ಫೌಂಡೇಶನ್, ಕರ್ನಾಟಕ – ಬೆಂಗಳೂರು, ಶ್ರೀಮತಿ ಅಶ್ವತ್ಥಲಕ್ಷ್ಮಿ ಮತ್ತು ಶ್ರೀ ಎಸ್.ಎ. ಸುಬ್ರಮಣ್ಯಶೆಟ್ಟಿ ಮತ್ತು ಮಕ್ಕಳು, ದೊಡ್ಡಬಳ್ಳಾಪುರ ಇವರು ಉಪಸ್ಥಿತರಿದ್ದರು.
ಜಮುರಾ ಕಲಾವಿದರಿಂದ ವಚನ ಪ್ರಾರ್ಥನೆ, ಪೆÇ್ರ.ಸಿ.ವಿ. ಸಾಲಿಮಠ ಸ್ವಾಗತಿಸಿದರು. ಜಿ.ಟಿ. ಪ್ರದೀಪ್‍ಕುಮಾರ್ ನಿರೂಪಿಸಿದರು.

Leave a Comment