ಪಂಚಭೂತಗಳಲ್ಲಿ ಲೀನವಾದ ಜೇಟ್ಲಿ; ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ನವದೆಹಲಿ.ಆ.25.ರಾಜಕೀಯ ಧುರೀಣ ಹಾಗೂ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಪಾರ್ಥೀವ ಶರೀರಕ್ಕೆ ಇಲ್ಲಿನ ನಿಗಮ್ ಬೋಧ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್, ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಮ್ ನಬಿ ಆಜಾದ್, ಯೋಗ ಗುರು ರಾಮದೇವ್ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.

ನಿತೀಶ್ ಕುಮಾರ್, ದೇವೇಂದ್ರ ಫಡ್ನವೀಸ್, ವಿಜಯ್ ರೂಪಾನಿ, ಮನೋಹರ್ ಲಾಲ್ ಕಟ್ಟರ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಬಿಜೆಪಿ ಪ್ರಧಾನ  ಕಚೇರಿಯೆದುರು ಅನೇಕ ರಾಜಕೀಯ ಗಣ್ಯರು ಹಾಗೂ ನಾಗರಿಕರು ಅಂತಿಮ ದರ್ಶನ ಪಡೆದರು. ಬೆಳಗ್ಗೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಿರಿಯ ಬಿಜೆಪಿ ನಾಯಕರು, ಹಿರಿಯ ಕಾಂಗ್ರೆಸ್ ನಾಯಕ  ಮೋತಿಲಾಲ್ ನೆಹರು, ಎನ್ ಸಿಪಿ ನಾಯಕ ಶರದ್ ಪವಾರ್ ಹಾಗೂ ಪ್ರಫುಲ್ ಪಟೇಲ್, ಆರ್ ಎಲ್ ಡಿ  ನಾಯಕ ಅಜಿತ್ ಸಿಂಗ್ , ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಜೇಟ್ಲಿ ಅವರ ಮನೆಗೆ  ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಬಹ್ರೈನ್ ನಲ್ಲಿರುವ ಪ್ರಧಾನಿ  ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ತಮ್ಮ ‘ಸ್ನೇಹಿತ’ ಜೇಟ್ಲಿ ಅವರನ್ನು  ಸ್ಮರಿಸಿದ್ದಾರೆ. ‘ನನ್ನ ಸ್ನೇಹಿತ ಇಹಲೋಕ ತ್ಯಜಿಸಿರುವಾಗ ನಾನು ಇಷ್ಟು ದೂರದಲ್ಲಿರುವೆ  ಎಂಬುದನ್ನು ಊಹಿಸಲೂ ಕಷ್ಟವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಾವು ಮಾಜಿ ವಿದೇಶಾಂಗ  ಸಚಿವೆ ಸುಷ್ಮಾ ಸ್ವರಾಜ್ ಜಿ ಅವರನ್ನು ಕಳೆದುಕೊಂಡೆವು. ಇಂದು ನಾನು ನನ್ನ ಸ್ನೇಹಿತ  ಅರುಣ್ ಅವರನ್ನು ಕಳೆದುಕೊಂಡಿರುವೆ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದಕ್ಕೂ  ಮುನ್ನ ಅವರು ಜೇಟ್ಲಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದರು. ಆಗ  ಕುಟುಂಬ ಸದಸ್ಯರು, ಮೋದಿ ಅವರಿಗೆ ತಮ್ಮ ಪ್ರಮುಖ ಪ್ರವಾಸವನ್ನು ಮೊಟಕುಗೊಳಿಸದಂತೆ ಸಲಹೆ  ನೀಡಿದ್ದರು ಎನ್ನಲಾಗಿದೆ. ಮೋದಿ ಅವರು ಇಂದು ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ 7  ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಏಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದರು.  ಕೆಲ ದಿನಗಳ ಕಾಲ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ, ಶುಕ್ರವಾರ ರಾತ್ರಿಯಿಂದ ಅವರು ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ್ದು, ಶನಿವಾರ ಇಹಲೋಕ ತ್ಯಜಿಸಿದರು. ಅವರು ತಮ್ಮ ಪತ್ನಿ, ಪುತ್ರ ಹಾಗೂ ಮಗಳನ್ನು ಅಗಲಿದ್ದಾರೆ.

ಅವರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ಜನವರಿಯಲ್ಲಿ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು.

ವೃತ್ತಿಯಲ್ಲಿ ವಕೀಲರಾಗಿದ್ದ ಜೇಟ್ಲಿ, ಮೋದಿ ಅವರ ಮೊದಲ ಅವಧಿಯ ಸಂಪುಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಹಣಕಾಸು ಹಾಗೂ ರಕ್ಷಣಾ ಇಲಾಖೆಗಳನ್ನು ನಿರ್ವಹಿಸಿದ್ದು, ಅನೇಕ ಪ್ರಕರಣಗಳಲ್ಲಿ ಸರ್ಕಾರದ ಸಮಸ್ಯೆಗಳ ಪರಿಹಾರಕನಾಗಿ ಕೆಲಸ ನಿರ್ವಹಿಸಿದ್ದರು. ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಜಿಎಸ್ ಟಿ ಯಂತಹ ಮಹತ್ವದ ಕಾಯ್ದೆಯನ್ನು ಜಾರಿಗೆ ತಂದಿದ್ದರು.

ಕಳೆದ ವರ್ಷದ ಮೇ ತಿಂಗಳಲ್ಲಿ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ

Leave a Comment