ನ.17ರಂದು ಮೇಯರ್ ಚುನಾವಣೆ

ಮೈಸೂರು, ನ.8- ಮೈಸೂರು ಮೇಯರ್, ಉಪ ಮೇಯರ್ ಆಯ್ಕೆಗೆ ನವೆಂಬರ್ 17ರಂದು ಚುನಾವಣೆ ನಿಗದಿಪಡಿಸಲಾಗಿದೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಕೋರ್ಟ್ ಹಾಲ್‍ನಲ್ಲಿ ಇಂದು ಅಧಿ ಕಾರಿಗಳೊಂದಿಗೆ ಮೇಯರ್ ಚುನಾವಣೆ ಸಂಬಂಧ ಸಭೆ ನಡೆಸಿದ ಪ್ರಭಾರ ಪ್ರಾದೇಶಿಕ ಆಯುಕ್ತ ವಿ. ಯಶವಂತ ಅವರು, ಚುನಾವಣೆಗೆ ದಿನಾಂಕ ನಿಗದಿಪಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯೊಂದಿಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ಕಾರ್ಪೋರೇಟರ್ ಗಳಿಗೂ ತಿಳಿವಳಿಕೆ ನೋಟೀಸ್ ತಲುಪಿಸಿ ಎಂದು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಶಿವಾನಂದ ಮೂರ್ತಿ ಅವರಿಗೆ ಸೂಚನೆ ನೀಡಿದರು. ಚುನಾವಣೆ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಯಬೇಕಾಗಿರುವುದರಿಂದ ಸಭಾ ನಡಾವಳಿಯನ್ನು ನಿಯಮಾನುಸಾರ ಸಿದ್ಧಪಡಿಸಿ, ಅಂದು ಸಭಾಂಗಣದಲ್ಲಿ ಆಸನಗಳ ವ್ಯವಸ್ಥೆ ಮಾಡುವಂತೆಯೂ ಪ್ರಾದೇಶಿಕ ಆಯುಕ್ತ ಯಶವಂತ್ ನಿರ್ದೇಶನ ನೀಡಿದರು. ಚುನಾವಣಾ ಪ್ರಕ್ರಿಯೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪಾಲಿಕೆ ಕಚೇರಿ ಸಭಾಂಗಣ, ಆವರಣ ಹಾಗೂ ಪ್ರವೇಶ ದ್ವಾರದ ಬಳಿ ಸಿಬ್ಬಂದಿಗಳನ್ನು ನಿಯೋಜಿಸಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಸಭೆಯಲ್ಲಿ ಹಾಜರಿದ್ದ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎನ್. ವಿಷ್ಣುವರ್ಧನ್ ಸೂಚನೆ ನೀಡಿದರು. ಸಭೆಯಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತರಾದ ರೂಪಾ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ, ಮೇಯರ್ ಆಪ್ತ ಕಾರ್ಯದರ್ಶಿ ನಿರ್ಮಲ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

Leave a Comment