ನ್ಯೂಜಿಲೆಂಡ್‌ ಪಾಲಿಗೆ ಅದ್ಭುತ ವಿಶ್ವಕಪ್‌: ಸಚಿನ್‌

ಲಂಡನ್‌, ಜು 18 – ನೀವು ತೋರಿದ ಪ್ರದರ್ಶನ ಎಲ್ಲರ ಶ್ಲಾಘನೆಗೆ ಒಳಗಾಗಿದೆ. ನಿಮ್ಮ ಪಾಲಿಗೆ ಅದ್ಭುತ ವಿಶ್ವಕಪ್‌ ಇದಾಗಿದೆ ಎಂದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಕೊಂಡಾಡಿದ್ದಾರೆ.
ಕಳೆದ ಭಾನುವಾರ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಸೂಪರ್‌ ಓವರ್‌ನಲ್ಲಿ ಬೌಂಡರಿ ನಿಯಮದ ಅನ್ವಯ ಆತಿಥೇಯ ಇಂಗ್ಲೆಂಡ್‌ ಚೊಚ್ಚಲ ವಿಶ್ವಕಪ್‌ ತನ್ನದಾಗಿಸಿಕೊಂಡಿತು. ಪಂದ್ಯದ ಬಳಿಕ ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸಚಿನ್‌ ಬಳಿ ಕಿವೀಸ್‌ ನಾಯಕ ಸ್ವೀಕರಿಸುವ ವೇಳೆ ಈ ಮಾತನ್ನು ಕ್ರಿಕೆಟ್‌ ದಂತಕತೆ ಹೇಳಿದ್ದರು.

ಪ್ರಶಸ್ತಿ ವಿತರಣೆ ವೇಳೆ ಸಚಿನ್‌ ತೆಂಡೂಲ್ಕರ್‌ ಅವರು ನ್ಯೂಜಿಲೆಂಡ್‌ ಸೋಲು ಅನುಭವಿಸಿದ ಸೂಪರ್‌ ಓವರ್‌ನ ಬೌಂಡರಿ ನಿಯಮದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ವಿಶ್ವಕಪ್‌ ಟೂರ್ನಿಯಲ್ಲಿ ಕೇನ್‌ ವಿಲಿಯಮ್ಸನ್‌ ಒಟ್ಟು 578 ರನ್‌ ಗಳಿಸಿದ್ದರು. ವಿಶ್ವಕಪ್‌ ಇತಿಹಾಸದಲ್ಲೇ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸಿದ ವಿಶ್ವದ ಮೊದಲ ನಾಯಕ ಎಂಬ ಸಾಧನೆಗೆ ಕಿವೀಸ್‌ ನಾಯಕ ಭಾಜನರಾಗಿದ್ದರು.
“ವಿಲಿಯಮ್ಸನ್ ಅವರ ಬಗ್ಗೆ ಅತ್ಯುತ್ತಮ ವಿಷಯವೆಂದರೆ ಶಾಂತ ಸ್ವಭಾವ. ಯಾವುದೇ ಸಂದರ್ಭದಲ್ಲೂ ಅವರು ತನ್ನ ಹಿಡಿತವನ್ನು ಕಳೆದುಕೊಳ್ಳುವುದಿಲ್ಲ. ಅವರು ವಿಶ್ವಕಪ್ ಗೆಲ್ಲಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ, ಅದು ಅವರ ಮುಖದ ಮೇಲೆ ಪ್ರತಿಫಲಿಸಲಿಲ್ಲ” ಎಂದು ತೆಂಡೂಲ್ಕರ್‌ ಶ್ಲಾಘಿಸಿದ್ದಾರೆ.
ವಿಲಿಯಮ್ಸನ್ ಅವರು ಆಟವನ್ನು ಸಂಪೂರ್ಣ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಅವರ ಫೀಲ್ಡಿಂಗ್ ನಿಲ್ಲಿಸುವಿಕೆ, ಕಡಿಮೆ ರನ್‌ ಇದ್ದರೂ ಅದನ್ನು ಸಮರ್ಥಿಸಿಕೊಳ್ಳುವಾಗ ಬೌಲಿಂಗ್ ಬದಲಾವಣೆಗಳು ಶ್ಲಾಘನೀಯ. ಜಡೇಜಾ ಸೆಮಿಫೈನಲ್‌ನಲ್ಲಿ ದೊಡ್ಡ ಹೊಡೆತಗಳನ್ನು ಆಡುತ್ತಿದ್ದಾಗಲೂ ಅವರು ಶಾಂತವಾಗಿದ್ದರು ಮತ್ತು ಕೊನೆಯಲ್ಲಿ ಫಲಿತಾಂಶವು ಅವರ ಪರವಾಗಿತ್ತು. ” ಇದು ಅವರ ನಾಯಕತ್ವದ ಸಾಮಾರ್ಥ್ಯ ಏನೆಂಬುದು ಅರ್ಥವಾಗಲಿದೆ ಎಂದು ಭಾವಿಸುತ್ತೇನೆ” ಎಂದು ಹೇಳಿದರು.

Leave a Comment