ನ್ಯಾ.ಸದಾಶಿವ ಆಯೋಗ ವರದಿ ಜಾರಿ : ಅಡ್ಡಗೋಡೆ ಮೇಲೆ ದೀಪವಿಟ್ಟ ಸಿಎಂ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಅ. ೧೨- ಪರಿಶಿಷ್ಠ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಧ್ಯಯನ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಈ ವರದಿಯ ಸಾಧಕ-ಬಾಧಕಗಳನ್ನು ಚರ್ಚಿಸಿ ವರದಿ ಅನುಷ್ಠಾನದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸಂಬಂಧ ಇಂದು ಎಡಗೈ ಸಮುದಾಯಕ್ಕೆ ಸೇರಿದ ಸಂಸದರು, ಶಾಸಕರು ಹಾಗೂ ಮುಖಂಡರ ಜತೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ವರದಿಯ ಸಾಧಕ-ಬಾಧಕಗಳ ಬಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಮುನಿಯಪ್ಪ ಇವರುಗಳ ಜತೆ ಒಂದು ಸುತ್ತಿನ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಭೆಯಲ್ಲಿ ಹೇಳಿದರು.

ಪ್ರಿಯಾಂಕ ಖರ್ಗೆ ಹೇಳಿಕೆ

ಈ ಸಭೆಯ ನಂತರ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಒಳ ಮೀಸಲಾತಿಗೆ ಸಂಬಂಧಿಸಿದ ಸದಾಶಿವ ಆಯೋಗದ ವರದಿ ಕುರಿತು ಇಂದು ಸಭೆಯಲ್ಲಿ ಸಮಗ್ರವಾಗಿ ಚರ್ಚೆ ನಡೆಸಲಾಯಿತು.

ಈ ವರದಿಯ ಸಾಧಕ-ಬಾಧಕಗಳನ್ನು ಮತ್ತೊಮ್ಮೆ ಚರ್ಚಿಸಿ ನಂತರ ವರದಿ ಅನುಷ್ಠಾನದ ತೀರ್ಮಾನ ಕೈಗೊಳ್ಳುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರವಾಯಿತು ಎಂದರು.

ಈ ವರದಿ ವೈಜ್ಞಾನಿಕವೇ? ಅವೈಜ್ಞಾನಿಕವೇ? ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ.  ಈ ವರದಿಯಲ್ಲಿ ಏನಿದೆ ಎಂಬುದೇ ಬಹಿರಂಗವಾಗಿಲ್ಲ. ಸಚಿವ ಸಂಪುಟದಲ್ಲಿ ವರದಿ ಮಂಡನೆಯಾಗಿಲ್ಲ. ವರದಿ ಮಂಡನೆಯಾದ ನಂತರವೇ ವರದಿಯಲ್ಲಿ ಏನಿದೆ ಎಂಬುದು ಗೊತ್ತಾಗಲಿದೆ.

ಹಾಗಾಗಿ ವರದಿ ಅವೈಜ್ಞಾನಿಕ ಎಂಬ ಮಾತುಗಳು ಸರಿಯಲ್ಲ ಎಲ್ಲ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಭೆಯಲ್ಲಿ ತಿಳಿಸಿದರು ಎಂದರು.

ಆಂಜನೇಯ ಹೇಳಿಕೆ

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಆಂಜನೇಯ ವರದಿ ಜಾರಿ ಬಗ್ಗೆ ಮುಖ್ಯಮಂತ್ರಿಗಳಿಗೆ ಎಲ್ಲವನ್ನು ಹೇಳಿದ್ದೇವೆ ಆದಷ್ಟು ಶೀಘ್ರ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಇಂದೇ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಹಂಬಣ್ಣ ಅವರು 2 ತಿಂಗಳಲ್ಲಿ ವರದಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿನ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಅದರಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಹೋರಾಟವನ್ನು ಕೈಬಿಡಲಾಗುವುದು ಎಂದರು.

ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಮಾದಿಗ ಸಮುದಾಯದವರಿಗೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸಭೆ ಸಕಾರಾತ್ಮಕವಾಗಿ ನಡೆದಿದ್ದು, 2 ತಿಂಗಳಲ್ಲಿ ವರದಿ ಜಾರಿಯಾಗುವ ಅಶ್ವಾಸನೆ ಮುಖ್ಯಮಂತ್ರಿಗಳಿಂದ ಸಿಕ್ಕಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಸಂಸದರಾದ ಕೆ.ಹೆಚ್ ಮುನಿಯಪ್ಪ, ಎಲ್. ಹನುಮಂತಯ್ಯ, ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಆರ್.ಬಿ ತಿಮ್ಮಾಪುರ, ಧರ್ಮಸೇನ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಸದಾಶಿವ ಆಯೋಗದ ಹೋರಾಟ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment