ನ್ಯಾ.ಎ.ಜೆ. ಸದಾಶಿವ ಆಯೋಗ ತಿರಸ್ಕರಿಸುವಂತೆ ಒತ್ತಾಯ

ದಾವಣಗೆರೆ, ಜ. ೧೨- ಪರಿಶಿಷ್ಟ ಜಾತಿಗಳನ್ನು ಛಿದ್ರಗೊಳಿಸುವ ನ್ಯಾ.ಎ.ಜೆ. ಸದಾಶಿವ ಆಯೋಗ ಅವೈಜ್ಞಾನಿಕ, ಅಸಂವಿಧಾನಿಕ ವರದಿಯನ್ನು ತಿರಸ್ಕರಿಸುವಂತೆ ಕರ್ನಾಟಕ ಮೀಸಲಾತಿ ಒಕ್ಕೂಟವು ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರವರ ಆಶಯಗಳಿಗೆ ವಿರೋಧವಾಗಿ ನ್ಯಾ.ಎ.ಜೆ. ಸದಾಶಿವ ಆಯೋಗ ತನಿಖೆಗೆ ನೀಡಲಾದ ಮೂಲಭೂತ ಉದ್ದೇಶಗಳನ್ನು ಕಡೆಗಣಿಸಿ ಪರಿಶಿಷ್ಟ ಜಾತಿಗಳಲ್ಲಿ ಒಂದು ಉಪಜಾತಿಯ ಹಿತಾಸಕ್ತಿಯನ್ನು ಕಾಪಾಡಲು ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗಾಗಲೇ ಸದಾಶಿವ ಆಯೋಗದ ವರದಿಯಿಂದ ಸೋರಿಕೆಯಾಗಿರುವ ಅಂಶಗಳನ್ನು ಗಮನಿಸಿದಾಗ ದಲಿತ ಸಮುದಾಯಗಳ ಒಳಗೆ ಪರಸ್ಪರ ದ್ವೇಷ, ಅಸೂಯೇ, ಅವಮಾನ ಅವಹೇಳನ ಮತ್ತು ಜಾತಿ ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕಿದೆ ಎಂದು ಆರೋಪಿಸಿದರು.
ಆಯೋಗವು ಸಮಗ್ರವಾಗಿ ದಲಿತ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹೌದ್ಯೋಗಿಕ ಅಂಶಗಳ ಬಗ್ಗೆ ವಸ್ತು ನಿಷ್ಟೆ ಸಮೀಕ್ಷೆ ಮಾಡಬೇಕಾಗಿತ್ತು. ಆದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿ ಪಟ್ಟಭದ್ರ ಹಿತಾಸಕ್ತಿಗಳ ಅಭಿಪ್ರಾಯ ಪಡೆದು ಪರಿಶಿಷ್ಟ ಜಾತಿಯಲ್ಲಿನ 101 ಜಾತಿಯ ಪ್ರಮುಖರನ್ನು ಕಡೆಗಣಿಸಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ ಎಂದರು.
ನ್ಯಾ.ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಪಡಿಸಬೇಕು. ದಲಿತ ಹಿಂದುಳಿದ ಅಲ್ಪಸಂಖ್ಯಾತರು ಇತ್ಯಾದಿ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಯ ಮಿತಿಯನ್ನು ಶೇ. 50 ರಿಂದ 75ಕ್ಕೆ ವಿಸ್ತರಿಸಬೇಕು. ಸೋರಿಕೆಯಾಗಿರುವ ವರದಿಯ ಅಂಶಗಳ ಪ್ರಕಾರ ಇದು ಅವಾಸ್ತವಿಕ, ಅವೈಜ್ಞಾನಿಕ, ಅಸಂವಿಧಾನಿಕವಾಗಿದ್ದು, ನ್ಯಾ. ಸದಾಶಿವ ಆಯೋಗದ ವರದಿಯು ತಿರಸ್ಕಾರಕ್ಕೆ ಯೋಗ್ಯವಾಗಿದೆ. ಈ ವರದಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಮಾಡದೇ ತರಾತುರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ದುಸಾಹಸಕ್ಕೆ ರಾಜ್ಯ ಸರ್ಕಾರ ಕೈ ಹಾಕಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಂಘದ ಗೌರವಾಧ್ಯಕ್ಷ ಜಯಣ್ಣ, ಎನ್. ಜಯದೇವ ನಾಯ್ಕ, ಆನಂದಪ್ಪ, ಚಿನ್ನ ಸಮುದ್ರ ಶೇಖರನಾಯ್ಕ್, ರಾಘವೇಂದ್ರ, ತಿಪ್ಪೇಶ್, ವೆಂಕಟೇಶ್, ಚಂದ್ರಪ್ಪ, ಹನುಮಂತಪ್ಪ ಸೇರಿದಂತೆ ಮತ್ತಿತರರಿದ್ದರು.

Leave a Comment