ನ್ಯಾಯಾಲಯದ ತೀರ್ಪಿನ ಬಗ್ಗೆ ಜನರು ಚರ್ಚಿಸಲಿ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್

ಕೋಲಾರ, ನ‌.13 – ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಅನರ್ಹರ ವಿಚಾರವಾಗಿ ತಾವು ನೀಡಿದ ತೀರ್ಪನ್ನು ನ್ಯಾಯಾಲಯ ಪುರಸ್ಕರಿಸಿರುವುದಾಗಿ ರಮೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರಿಗೆ ಕೋಲಾರದಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯಡಿ 17 ಮಂದಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿದ್ದೆ. ಈ ಸದನದ ಅವಧಿಗೆ ಅವರು ಸ್ಪರ್ಧಿಸುವಂತಿಲ್ಲ ಎಂದಿದ್ದೆ. ಉಳಿದ ಸದನದ ಅವಧಿಗೆ ಕೊಟ್ಟಿರುವ  ವ್ಯಾಖ್ಯಾನವನ್ನು ಒಪ್ಪದಿರುವ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕು. ತೀರ್ಪಿನ ವಿಚಾರವಾಗಿ ಯಾರು ಯಾರು ಏನೇನು ಪ್ರತಿಕ್ರಿಯೆ ನೀಡಿದ್ದಾರೆಯೋ ಅವೆಲ್ಲ ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ದೇಶದ ಜನರು ಪ್ರಜಾಪ್ರಭುತ್ವವನ್ನು ಉಳಿಸಬೇಕು. ಜನರು ಜಾಗೃತರಾಗಬೇಕು, ರಾಜಕೀಯ ಪಕ್ಷಗಳು ಜನರ ಸ್ವಾಭಿಮಾನ ಕಸಿದುಕೊಳ್ಳಬಾರದು. ಚುನಾವಣೆಗೂ ನೈತಿಕತೆ ಗೂ ಸಂಬಂಧವೇ ಇಲ್ಲ. ದೇಶದ ಮಹಾನುಭಾವ ಪ್ರಧಾನಿ ಮೋದಿ ಚುನಾವಣಾ ಸುಧಾರಣೆ ಕಡೆ ಗಮನ ಕೊಡಲಿ‌. ನಿಷ್ಠೆಯಿಂದ ಚುನಾವಣಾ ಸುಧಾರಣೆ ಮಾಡಲಿ, ಚುನಾವಣೆಗಳೇ ಸರಿಯಾಗಿ ನಡೆಯುತ್ತಿಲ್ಲ.

ಚುನಾವಣೆಗೆ ಸ್ಪರ್ಧಿಸುವವರಿಗೆ ಕೋಟ್ಯಂತರ ರೂಪಾಯಿ ಆದಾಯ ಎಲ್ಲಿಂದ ಬರುತ್ತಿದೆ ? ಎಂದು ಪ್ರಶ್ನಿಸಿದ ಅವರು, ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಂಶಗಳೇ ಬೇರೆ ಅವರ ನಿಜವಾದ ಆದಾಯವೇ ಬೇರೆ. ಕೆಲವರು ದೇಶದ‌ ಸಂಪತ್ತನ್ನು ಲೂಟಿಗೈದು  ಶ್ರೀಮಂತರಾಗುತ್ತಿದ್ದಾರೆ ಎಂದು ರಮೇಶ್ ಕುಮಾರ್ ವಿವರಿಸಿದರು.

ತಾವು  ಕಾಂಗ್ರೆಸ್ ತತ್ವಗಳ ಜೊತೆಗೇ ಇದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಡವರ ಪರವಾದ ಕಾಂಗ್ರೆಸ್ ನಲ್ಲಿಯೇ ತಾವು ಇರುವುದಾಗಿ ಪ್ರಶ್ನೆಯೊಂದಕ್ಕೆ ರಮೇಶ್ ಕುಮಾರ್ ವಿವರಿಸಿದರು.

ರಾಯಚೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ರಾಜ್ಯದಲ್ಲಿ ನಡೆದ  ಕುದುರೆ ವ್ಯಾಪಾರದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಸ್ಪೀಕರ್ ಆದೇಶ ಎತ್ತಿ ಹಿಡಿದಿದ್ದು, ಅನರ್ಹರು ಸ್ವಾರ್ಥಕ್ಕಾಗಿ ಪಕ್ಷ ಬದಲಾಯಿಸಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿರುವ ಯಡಿಯೂರಪ್ಪ ಹಾಗೂ ಅಮಿತ್ ಶಾ

ನೈತಿಕ ಹೊಣೆಹೊತ್ತು  ರಾಜೀನಾಮೆ ನೀಡಬೇಕು‌. ಚುನಾವಣೆಯಲ್ಲಿ 15 ಜನ ಕುದುರೆ ವ್ಯಾಪಾರಿಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.

Leave a Comment