ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಅವಶ್ಯ: ಮರಿತಿಬ್ಬೇಗೌಡ

ಮೈಸೂರು, ಡಿ.7- ನ್ಯಾಯಾಂಗ ಇಲಾಖೆಯಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಾದರೆ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಸಾಧ್ಯವಾಗುತ್ತದೆ ಎಂದು ಉಪಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು.
ಇಂದು ಬೆಳಗ್ಗೆ ಪತ್ರಕರ್ತರ ಭವನದಲ್ಲಿ ಲಾ ಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ ಆಯೋಜಿಸಿದ್ದ 2018ನೇ ಸಾಲಿನ ಕ್ಯಾಲೆಂಡರ್ ಹಾಗೂ ದಿನಚರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಎಲ್ಲ ವ್ಯವಹಾರಗಳು ನಡೆಯಬೇಕು ಎಂಬ ಸರ್ಕಾರದ ಸೂಚನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದರು.
ವಕೀಲರಿಗೆ ದಿನದರ್ಶಿಕೆ ಹಾಗೂ ದಿನಚರಿ ಪುಸ್ತಕವು ಬಹಳ ಅವಶ್ಯಕ. ತಮ್ಮ ಪ್ರತಿದಿನದ ಕೆಲಸ ಕಾರ್ಯಗಳು, ಅಗತ್ಯ ಮಾಹಿತಿಗಳು, ದಿನಚರಿಗಳು ಪುಸ್ತಕದಲ್ಲಿ ನಮೂದಾಗಿರುತ್ತದೆ. ಇದರಿಂದ ಒತ್ತಡದಲ್ಲಿಯೂ ಸುಗಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಲಾ ಗೈಡ್ ಮಾಸಪತ್ರಿಕೆ ಕನ್ನಡದಲ್ಲಿ ಹೊರತರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮಾಸಪತ್ರಿಕೆಯು ದಿನಪತ್ರಿಕೆಗಳಂತಲ್ಲ. ಈ ಪತ್ರಿಕೆಯಲ್ಲಿ ಒಂದು ತಿಂಗಳ ಸಂಪೂರ್ಣ ಮಾಹಿತಿ ಜನಸಾಮಾನ್ಯರಿಗೆ ಲಭ್ಯವಾಗುತ್ತದೆ ಜೊತೆಗೆ ಜನಸಾಮಾನ್ಯರಿಗೂ ಕಾನೂನು ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಆಂಗ್ಲಭಾಷೆ ಹೆಚ್ಚಾಗಿ ನ್ಯಾಯಾಂಗ ಇಲಾಖೆಯಲ್ಲಿ ಪ್ರಚಲಿತವಿದ್ದು, ಕಾನೂನು ಅರಿವು ಸಾಮಾನ್ಯ ಜನರಿಗೆ ಕಷ್ಟಸಾಧ್ಯವಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮದ್ ಮುಜಿರುಲ್ಲಾ ಮಾತನಾಡಿ, ದಿನಚರಿ ಹಾಗೂ ದಿನದರ್ಶಿಕೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ವಕೀಲರು ದಿನನಿತ್ಯ ವಾದ ಮಾಡುವ ಕೇಸ್‍ಗಳು, ನ್ಯಾಯಾಲಯ ನೀಡುವ ವಿಚಾರಣಾ ದಿನಾಂಕಗಳು ಸೇರಿದಂತೆ ಉಪಯುಕ್ತ ಮಾಹಿತಿಗಳನ್ನು ದಿನಚರಿಯಲ್ಲಿ ನಮೂದಿಸುವುದರಿಂದ ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ ಎಂದು ಹೇಳಿದರು.
ನ್ಯಾಯಮೂರ್ತಿ ಮಹದೇವಯ್ಯ, ಎಚ್.ಎನ್. ವೆಂಕಟೇಶ್, ಸಂಘದ ಅಧ್ಯಕ್ಷ ರಾಮಮೂರ್ತಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ರಾಘವೇಂದ್ರ, ಸಯ್ಯದ್ ಶಫಿ ಅಹಮದ್ ಅವರನ್ನು ಸನ್ಮಾನಿಸಲಾಯಿತು.

Leave a Comment