ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹ

ಕೊರಟಗೆರೆ, ಜು. ೧೭- ತಾಲ್ಲೂಕಿನ ಮಧ್ಯವೆಂಕಟಾಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ಸ್ಥಾಪಿಸಿ ಪಡಿತರ ಆಹಾರ ವಿತರಣಾ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ತಹಶೀಲ್ದಾರ್ ರಾಜಣ್ಣನವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಹನುಮಂತಯ್ಯ, ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ವೆಂಕಟಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ನಾಗರಹಳ್ಳಿ, ಬಂದ್ರೇಹಳ್ಳಿ ಗ್ರಾಮಗಳಲ್ಲಿ ಸುಮಾರು 350 ಮಂದಿ ಆಹಾರ ಪಡಿತರದಾರರಿದ್ದು, ನ್ಯಾಯಬೆಲೆ ಅಂಗಡಿ ಇರುವ ಲಿಂಗಾಪುರ ಗ್ರಾಮ ಸುಮಾರು 3 ಕಿ.ಮೀ. ದೂರವಿರುವುದರಿಂದ ಪ್ರತಿ ತಿಂಗಳು ನಡೆದು ಹೋಗಿ ಪಡಿತರ ತರಬೇಕಾದ ಪರಿಸ್ಥಿತಿ ಉಂಟಾಗಿದ್ದು, ಗ್ರಾಮಗಳಲ್ಲಿ ವಯಸ್ಸಾದ ವೃದ್ಧರು, ಶಾಲಾ ಮಕ್ಕಳು ಇದ್ದು, ಸಂಜೆ ವೇಳೆ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತರಲು ಸಾಧ್ಯವಾಗದ ಕಾರಣ ಮಧ್ಯವೆಂಕಟಾಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಪ್ರಾರಂಭಿಸುವಂತೆ 3 ಬಾರಿ ಮನವಿ ಸಲ್ಲಿಸಲಾಗಿತ್ತು. ಆಹಾರ ನಿರೀಕ್ಷಕರು ಬಂದು ಪರಿಶೀಲನೆ ಮಾಡಿ ಅನುಕೂಲ ಮಾಡದೆ ತಾತ್ಸಾರ ಮನೋಭಾವ ತೋರಿದರು. ಆದ್ದರಿಂದ ಆಹಾರ ಇಲಾಖೆ ಮೇಲಾಧಿಕಾರಿಗಳು ತಕ್ಷಣ ಪರಿಶೀಲಿಸಿ ವೆಂಕಟಾಪುರದಲ್ಲಿ ಆಹಾರ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಾಗರಾಜು, ರಂಗಣ್ಣ, ದೊಡ್ಡರಂಗಯ್ಯ, ಅರಸಪ್ಪ, ನರಸಯ್ಯ, ಲಕ್ಷ್ಮೀಕಾಂತ, ಕಾಂತರಾಜು, ವೆಂಕಟೇಶಪ್ಪ, ಕೆಂಪನಾಗಯ್ಯ, ಶ್ರೀನಿವಾಸ್, ರತ್ನಮ್ಮ, ಮಂಜುನಾಥ್, ಸಿದ್ದಪ್ಪ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Comment