ನ್ಯಾಯಬೆಲೆ ಅಂಗಡಿಯಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌ ಮಾರಾಟ: ಸಚಿವ ಗೋಪಾಲಯ್ಯ

ಬೆಂಗಳೂರು, ಫೆ.27 – ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ಗಳನ್ನು ಮಾರಾಟ ಮಾಡಲು ಉದ್ದೇಶಿಸಿದ್ದೇವೆ. ಆದರೆ ಸೋಪ್ ಅನ್ನು ಉಚಿವಾಗಿ ಕೊಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.
ವಿಕಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಕೇಂದ್ರ ಸಚಿವ ಸದಾನಂದಗೌಡರ ಜತೆ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಔಟ್ ಲೆಟ್ ದರದಲ್ಲಿ ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವುದೇ ಸಹಾಯಧನ ಅಥವಾ ರಿಯಾಯಿತಿಯಲ್ಲಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋದಾಮುಗಳ ಆಹಾರದಲ್ಲಿ ಮಲಾಥಿನ್ ರಾಸಾಯನಿಕ ಮಿಶ್ರ ಎಂಬ ಸುದ್ದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರ ಜೊತೆ ಸಭೆ ನಡೆಸಿದ್ದೇನೆ. ಆದರೆ ರಾಜ್ಯದ ಯಾವ ಗೋದಾಮಿನಲ್ಲಿಯೂ ಹೀಗೆ ಆಗಿಲ್ಲ. ನಮ್ಮ ಇಲಾಖೆಯ ಯಾವ ಜಿಲ್ಲೆಯಲ್ಲೂ ಈ ರೀತಿ ಮಾಡಿಲ್ಲ. 6 ತಿಂಗಳ ಮೇಲ್ಪಟ್ಟು ಸಂಗ್ರಹ ಆದಾಗ ಆಹಾರವನ್ನು ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. 6 ತಿಂಗಳು ಮೇಲ್ಪಟ್ಟ ನಂತರ ಗೋಣಿಚೀಲದ ಮೇಲೆ ಸಿಂಪಡಿಸ್ತಾರೆ. ಪರೀಕ್ಷಾ ವರದಿ ತರಿಸಿಕೊಂಡಿದ್ದು, ಎಲ್ಲವೂ ಸಮರ್ಪಕವಾಗಿದೆ. ಆಹಾರದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಗೋಪಾಲಯ್ಯ ತಿಳಿಸಿದರು.
ಎಫ್‌ಸಿಐ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂರಕ್ಷಣೆಗಾಗಿ ಮೆಲಥಿಯಂ ಕೀಟ ನಾಶಕ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅದು ಕೂಡ ಚೀಲಗಳ ಮೇಲೆ ಸಿಂಪಡಣೆ ಮಾಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಯಾವುದೇ ಗೋದಾಮುಗಳಲ್ಲಿ ಮೆಲಥಿಯಂ ಕೀಟನಾಶಕಗಳನ್ನು ಬಳಕೆ ಮಾಡುತ್ತಿಲ್ಲ‌ ಎಂದು ಅವರು ಸ್ಪಷ್ಟಪಡಿಸಿದರು.
ವಿವಿಧ ಅಂಗಡಿ ಮಳಿಗೆಗಳಿಗೆ ವಿಧಿಸಲಾಗುತ್ತಿರುವ ಸತ್ಯಪಾಲನಾ ತೆರಿಗೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. 2016ರಿಂದಲೂ ಈ ತೆರಿಗೆ ಹೆಚ್ಚಳ ಮಾಡಿರಲಿಲ್ಲ‌. ಅಲ್ಲದೆ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ 25,000 ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ಈ ದಂಡದ ಪ್ರಮಾಣ ಹೆಚ್ಚಿಸಲು ಸಹ ಉದ್ದೇಶಿಸಲಾಗಿದೆ ಎಂದು ಗೋಪಾಲಯ್ಯ ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಲ್ಲಿ ಬದಲಾವಣೆಯಾಗುವ ಸುಳಿವು ನೀಡಿದ ಸಚಿವ ಗೋಪಾಲಯ್ಯ, ಮುಂಬರುವ ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಮುಂದಿನ ಗತಿ ಏನು ಎಂಬುದು ಗೊತ್ತಾಗುತ್ತದೆ. ನಕಲಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವವರು ಕಾರ್ಡ್ ವಾಪಸ್ ಕೊಡಲು ಒಂದು ತಿಂಗಳವರೆಗೆ ಸಮಯಾವಕಾಶ ನೀಡಲಾಗಿದೆ. ನಂತರ ನಮ್ಮ ಅಧಿಕಾರಿಗಳು ಕಾರ್ಡ್‌ದಾರರ ಮನೆಬಾಗಿಲಿಗೆ ಬರುತ್ತಾರೆ. ಇದುವರೆಗೆ ಅವರು ತೆಗೆದುಕೊಂಡಿರುವ ಆಹಾರ ಧಾನ್ಯದ ಒಟ್ಟು ಮಾರುಕಟ್ಟೆ ಮೌಲ್ಯವನ್ನು ದಂಡದ ರೂಪದಲ್ಲಿ ಅವರಿಂದ ವಸೂಲಿ ಮಾಡಲು ಉದ್ದೇಶಿಸಲಾಗಿದೆ ಎಂದು ಗೋಪಾಲಯ್ಯ ತಿಳಿಸಿದರು.

Leave a Comment