ನೌಕರನಿಂದಲೇ ಬ್ಯಾಂಕ್‌ಗೆ ವಂಚನೆ

ಬಂಟ್ವಾಳ, ಫೆ.೧೩- ಸಿಂಡಿಕೇಟ್ ಬ್ಯಾಂಕ್‌ನ ಕಾವಳಪಡೂರು ಶಾಖೆಯ ಶಾಖಾ ವ್ಯವಸ್ಥಾಪಕನೋರ್ವ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಸಾಲ ಪಡೆದು ಬ್ಯಾಂಕ್‌ಗೆ ವಂಚಿಸಿದ್ದಲ್ಲದೆ, ಹಣ ದುರುಪಯೋಗಪಡಿಸಿದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ೨೦೧೪ರ ಜೂನ್ ೨೬ರಿಂದ ೨೦೧೬ರ ಮಾರ್ಚ್ ೧೯ರವರೆಗೆ ಕಾವಳಪಡೂರು ಸಿಂಡಿಕೇಟ್ ಬ್ಯಾಂಕ್ ಶಾಖೆಯ ಶಾಖಾ ವ್ಯವಸ್ಥಾಪಕನಾಗಿದ್ದ ಟಿ.ದೊರೈ ಎಂಬಾತ ಬ್ಯಾಂಕ್‌ನ ಹಲವು ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸುಮಾರು ೮೩.೯೮ ಲಕ್ಷ ರೂ. ಸಾಲ ಪಡೆದು ಬ್ಯಾಂಕ್ ವಂಚಿಸಿದ್ದಾನೆಂದು ಆರೋಪಿಸಲಾಗಿದೆ.
ಕೃಷಿ ಮತ್ತು ಜುವೆಲ್ಲರಿ ಹೆಸರಿನಲ್ಲಿ ವಂಚಿಸಿದ ಆರೋಪಿ ದೊರೈ ಸದ್ಯ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಬ್ಯಾಂಕ್‌ನ ಹಾಲಿ ಶಾಖಾ ವ್ಯವಸ್ಥಾಪಕರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಟಿ.ದೊರೈಯನ್ನು ಬ್ಯಾಂಕ್ ಹುದ್ದೆಯಿಂದ ವಜಾಗೊಳಿಸಲಾಗಿದೆಯೆಂದು ತಿಳಿದು ಬಂದಿದೆ.

Leave a Comment