ನೋಟ್ ಬ್ಯಾನ್ ಮೋದಿ ವಿರುದ್ಧ ಸಿಂಗ್ ವಾಗ್ದಾಳಿ

ನವದೆಹಲಿ, ನ. ೮- ಅಧಿಕ ಮೊತ್ತದ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದರಿಂದ ದೇಶದ ಅರ್ಥವ್ಯವಸ್ಥೆ ಮೇಲೆ ಉಂಟಾಗಿರುವ ಗಾಯದ ಕಲೆಗಳು ಕಾಲ ಕಳೆದಂತೆ ಈಗ ಸ್ಪಷ್ಟವಾಗಿ ಗೋಚರವಾಗುತ್ತಿವೆ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

500 ಹಾಗೂ 1000 ರೂ ಮುಖ ಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯ ಮಾಡಿ ಇಂದು 2 ವರ್ಷ ಪೂರ್ಣಗೊಂಡಿದೆ. ಎನ್‌ಡಿಎ ಸರ್ಕಾರದ ಈ ನಿರ್ಧಾರ ಖಂಡಿಸಿ, ಪ್ರತಿಪಕ್ಷ ಕಾಂಗ್ರೆಸ್ ದೆಹಲಿ ಸೇರಿದಂತೆ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ನೋಟು ಅಮಾನ್ಯೀಕರಣ ಅತ್ಯಂತ ದುರದೃಷ್ಟಕರ. ಇದು ಅವಿವೇಕದ ಕ್ರಮ ಎಂದು ಕಟುವಾಗಿ ಟೀಕಿಸಿದ್ದಾರೆ.

ನೋಟು ಅಮಾನ್ಯೀಕರಣದಿಂದ ಆರ್ಥಿಕ ದುಸ್ಸಾಹಸಗಳು ದೀರ್ಘಾವಧಿಯಲ್ಲಿ ದೇಶವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿ ಸರ್ವನಾಶಕ್ಕೂ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.

ನೋಟು ಅಮಾನ್ಯೀಕರಣದಂತಹ ದುಸ್ಸಾಹಸದಿಂದ ದೇಶದ ಅಭಿವೃದ್ಧಿಯು ವಿನಾಶದ ಅಂಚಿಗೆ ತಲುಪುತ್ತದೆ ಎಂಬ ವಿಷಯವನ್ನು ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕಾಗಿತ್ತು.

ಈ ಕ್ರಮದಿಂದಾಗಿ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ಸಂಕಷ್ಟಕ್ಕೆ ದೂಡಿದ ನೋಟು ಅಮಾನ್ಯೀಕರಣ ಮಾಡಿದ ಸಂದರ್ಭದಲ್ಲಿ ದೇಶದ ಆರ್ಥಿಕತೆ ಮತ್ತು ಜನರ ಮೇಲೆ ಉಂಟಾಗಿರುವ ಅತ್ಯಂತ ಗಂಭೀರ ದುಷ್ಪರಿಣಾಮಗಳನ್ನು ಕಾಣುವಂತಾಯಿತು ಎಂದು ಆರೋಪಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾಬ್ಯಾನರ್ಜಿ, ನೋಟು ಅಮಾನ್ಯೀಕರಣ ಕ್ರಮ ದೇಶದಲ್ಲಿ ಕರಾಳ ದಿನವಾಗಿದೆ ಎಂದು ಆರೋಪಿಸಿದ್ದಾರೆ.
ಅರ್ಥ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದನ್ನು ಖ್ಯಾತ ಅರ್ಥಶಾಸ್ತ್ರಜ್ಞರು, ಸಾಮಾನ್ಯ ಜನತೆ ಎಲ್ಲ ವಲಯದ ತಜ್ಞರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ನೋಟು ಅಮಾನ್ಯೀಕರಣ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ ಆಡಳಿತದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಹಣಕಾಸು ಹಗರಣಗಳು ಬೆಳಕಿಗೆ ಬಂದಿವೆ ಎಂದು ವಾಗ್ದಾಳಿ ನಡೆಸಿದರು.

Leave a Comment