ನೋಟ್ ಬ್ಯಾನ್ ಆದೇಶ ರದ್ದಿಗೆ ಆಗ್ರಹ

ರಾಯಚೂರು.ಅ.12- ಅವೈಜ್ಞಾನಿಕ ನೋಟು ಅಮಾನ್ಯ ಆದೇಶ ಕೇಂದ್ರ ಸರ್ಕಾರ ಶೀಘ್ರವೇ ಹಿಂಪಡೆಯುವಂತೆ ಹೈದ್ರಾಬಾದ್ ಕರ್ನಾಟಕ ಕೋಲಿ ಸಂಘದ ಅಧ್ಯಕ್ಷ ತಿರುಪತಿ ಯಾತಗಲ್ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸುವ ಅವೈಜ್ಞಾನಿಕ ನೋಟು ಅಮಾನ್ಯ ಪೀಕಲಾಟದಿಂದಾಗಿ ಜನ ಸಾಮಾನ್ಯರು ನಾನಾ ಸಮಸ್ಯೆ ಎದುರಿಸುವಂತಾಗಿದೆ. ಜಿಎಸ್‌ಟಿ ಕಾಯ್ದೆ ಅನುಷ್ಠಾನದಿಂದಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಕುಸಿತ ಕಂಡಿದೆ. ಈ ಹಿಂದಿನ ಯುಪಿಎ ಸರ್ಕಾರ ಆಡಳಿತಾವಧಿಯಲ್ಲಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಶೇ.7.5 ಪ್ರಮಾಣದಲ್ಲಿತ್ತು.
ಪ್ರಸ್ತುತ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರಮೋದಿ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಶೇ.5.4 ಪ್ರಮಾಣಕ್ಕೆ ಕುಸಿದಿದೆ. ರಾಷ್ಟ್ರದ ಸಂಪತ್ತಾಗಿರುವ ವಿದ್ಯಾವಂತ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಸೃಜನೆಯಲ್ಲಿ ಆಡಳಿತ ಸರ್ಕಾರಗಳು ಸಂಪೂರ್ಣ ಎಡವಿವೆ. ಜನತೆಯಲ್ಲಿ ಜಾತಿ ವಾದಕ್ಕೆ ಪ್ರೇರೆಪಿಸುವ ಮೀಸಲಾತಿ ವ್ಯವಸ್ಥೆಗೆ ಕಡಿವಾಣ ಹಾಕುವ ಒಮ್ಮತ ತೀರ್ಮಾನ ಕೈಗೊಂಡು ದುಂದುವೆಚ್ಚದ ದುಬಾರಿ ಯೋಜನೆ ರದ್ದುಪಡಿಸಬೇಕು.
ದೇಶದಲ್ಲಿ ಬಡ ಜನತೆ ಅಭಿವೃದ್ಧಿ ಪೂರಕ ವಿನೂತನ ಯೋಜನೆ ಜಾರಿಗೆ ತಂದು ಅವೈಜ್ಞಾನಿಕ ನೋಟು ಅಮಾನ್ಯೀಕರಣ ಆದೇಶ ಕೇಂದ್ರ ಸರ್ಕಾರ ಹಿಂಪಡೆಯಲೇಬೇಕೆಂದು ಆಗ್ರಹಿಸಿದರು.
ಸಂಘ ಸಂಚಾಲಕರಾದ ವೆಂಕಟೇಶ, ಬಾಲಯ್ಯ ಉಪಸ್ಥಿತರಿದ್ದರು.

Leave a Comment