ನೋಟು ಅಮಾನ್ಯೀಕರಣ: ಯುವ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ನ.೮-ಕೇಂದ್ರ ಸರ್ಕಾರ ಏಕಾಏಕಿ ೫೦೦ ಮತ್ತು ೧ ಸಾವಿರ ರೂಪಾಯಿ ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಿ ಇಂದಿಗೆ ಎರಡು ವರ್ಷ ತುಂಬಿದ ಹಿನ್ನಲೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನೋಟು ಅಮಾನ್ಯೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಆರ್ ಬಿಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು, ತಡೆದು ವಶಕ್ಕೆ ಪಡೆದರು.

ನಗರದಲ್ಲಿಂದು ನೃಪತುಂಗ ರಸ್ತೆಯಲ್ಲಿರುವ ಆರ್ ಬಿಐ ಕಚೇರಿ ಮುಂಭಾಗ ಜಮಾಯಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು,  ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

ನೋಟು ರದ್ದತಿ ನಿರ್ಣಯದಿಂದ ಸಾಮಾನ್ಯ ಜನತೆಗೆ ತೀವ್ರ ತೊಡಕಾಗಿದ್ದು, ಆರ್ಥಿಕ ನಿರ್ಬಂಧ ಉಂಟಾಗಿದೆ. ಹೀಗಿದ್ದರೂ ನರೇಂದ್ರ ಮೋದಿ ಅವರು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದು, ಅವರು ಕ್ಷಮೆಯಾಚಿಸುವಂತೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ಬಸವಗೌಡ ಬದರ್ಲಿ, ನರೇಂದ್ರ ಮೋದಿ ಅವರು ಮೊದಲೇ ಹೇಳಿ ನೋಟು ನಿಷೇಧ ಮಾಡಬೇಕಿತ್ತು ಎಂದು ಯಾರೂ ಹೇಳಿಲ್ಲ. ಬದಲಿಗೆ ಅವರೇ ಆದರೂ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ದೇಶದ ಜನರ ಜೀವನ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಇಂತಹ ಪೂರ್ವ ಸಿದ್ಧತೆ ಅತ್ಯಗತ್ಯವಾಗಿರುತ್ತದೆ ಎಂದರು.

ಕಪ್ಪು ಹಣವನ್ನು ತಡೆಗಟ್ಟಲೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದೇವೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಇದರ ಬದಲು ವಿದೇಶಿ ಸ್ವೀಸ್ ಬ್ಯಾಂಕ್‌ನಲ್ಲಿಟ್ಟದ್ದ ಕಪ್ಪು ಹಣವನ್ನು ವಾಪಸ್ ತರಲಾಗುತ್ತದೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿ ಈಗ ಹಣ ತರುವ ಕೆಲಸ ಮಾಡದೇ ಏಕಾಏಕಿ ನೋಟುಗಳನ್ನು ನಿಷೇಧ ಮಾಡಿದ್ದು ಎಷ್ಟು ಸರಿ. ಇದರಿಂದ ಜನಸಾಮನ್ಯರು ಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.

Leave a Comment