ನೋಟಿನಲ್ಲಿ ಗಣಪನ ನಿರ್ಮಾಣ

ಅಕೋಲ, ಸೆ. ೧೨: ಮಹಾರಾಷ್ಟ್ರದ ಅಕೋಲ ನಗರದಲ್ಲಿ ೨೧ ಲಕ್ಷ ರೂ. ಮೌಲ್ಯದ ಭಾರತೀಯ ನೋಟುಗಳನ್ನು (ಕರೆನ್ಸಿ) ಬಳಸಿ ನಿರ್ಮಿಸಿರುವ ೧೨ ಅಡಿ ಎತ್ತರದ “ದುಡ್ಡಿನ ಗಣೇಶ” ಮೂರ್ತಿ ಭಕ್ತಾದಿಗಳ ಹಾಗೂ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಅಂಗವಿಕಲ ಕಲಾವಿದ ತಿಲ್ಲು ತಿವಾರಿ ಎಂಬುವರು ಈ ಗಣಪತಿ ವಿಗ್ರಹ ನಿರ್ಮಿಸಲು ರೂ. ೧, ೧೦, ೧೦೦, ೨೦೦, ೫೦೦ ಮತ್ತು ೨೦೦೦ ರೂ. ನೋಟುಗಳನ್ನು ಬಳಸಿಕೊಂಡಿದ್ದಾರೆ. ಈ ಮೂರ್ತಿಯನ್ನು ಅಕೋಲದ ‘ವೀರ ಭಗತ್‌ಸಿಂಗ್ ಗಣೇಶೋತ್ಸವ ಮಂಡಳಿ’ ಪ್ರತಿಷ್ಠಾಪನೆ ಮಾಡಿದೆ.
ಮೂರೇ ದಿನಗಳಲ್ಲಿ ತಾವು ಈ ಮೂರ್ತಿಯನ್ನು ನಿರ್ಮಿಸಿದ್ದಾಗಿ ಕಲಾವಿದ ತಿವಾರಿ ಹೇಳಿದ್ದಾರೆ. “ಇದು ಸಂಪೂರ್ಣ ಮಾಲಿನ್ಯ ಮುಕ್ತ ಪರಿಸರ ಸ್ನೇಹಿ ಮೂರ್ತಿಯಾಗಿದ್ದು, ಸ್ಟಾಪ್ಲರ್ ಪಿನ್‌ಗಳ ನೆರವಿನಿಂದ ಕೇವಲ ಪೇಪರ್ ನಾರುಬಟ್ಟೆ (ಕ್ಯಾನ್‌ವಾಸ್) ಮೇಲೆ ನಿರ್ಮಿಸಲಾಗಿದೆ. ಒಂದೇ ಒಂದು ನೋಟು ಕೂಡ ಹಾಳಾಗದಂತೆ ಎಚ್ಚರ ವಹಿಸಲಾಗಿದೆ” ಎಂದು ಅವರು ಹೆಮ್ಮೆಪಟ್ಟಿದ್ದಾರೆ.
ಜೋಡಿಸಿರುವ ಎಲ್ಲ ನೋಟುಗಳ ಒಟ್ಟು ಮೌಲ್ಯ ೨೧ ಲಕ್ಷ ರೂ. ಆಗಲಿದ್ದು, ದಿನದ ೨೪ ಗಂಟೆಯೂ ಪೊಲೀಸರು ಈ ಮೂರ್ತಿಯ ಕಾವಲು ಕಾಯುತ್ತಿದ್ದಾರೆ ಎಂದು ಆತ ತಿಳಿಸಿದ್ದಾನೆ.
೧೦ ದಿನಗಳ ಈ ಗಣೇಶೋತ್ಸವ ಗುರುವಾರದ ‘ಅನಂತ ಚತುರ್ದಶಿ’ ಹಬ್ಬದ ದಿನ ‘ಗಣೇಶ ವಿಸರ್ಜನೆ’ಯೊಂದಿಗೆ ಅಂತ್ಯಗೊಳ್ಳಲಿದೆ. ಆದರೆ ಗಣೇಶ ಮೂರ್ತಿಯನ್ನು ನಿಜವಾದ ನೋಟುಗಳಿಂದ ತಯಾರಿಸಿರುವುದರಿಂದ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡುವುದಿಲ್ಲ ಎಂದು ತಿವಾರಿ ಸ್ಪಷ್ಟಪಡಿಸಿದ್ದಾರೆ. ಅದರ ಬದಲು ನಾವು ದುಡ್ಡಿನ ಗಣೇಶನ ನೋಟುಗಳನ್ನು ಒಂದೊಂದಾಗಿ ಬಿಚ್ಚಿ ಅವೆಲ್ಲವನ್ನೂ ಯಥಾಸ್ಥಿತಿ ಮಂಡಳಿಗೆ ವಾಪಸ್ ನೀಡುತ್ತೇವೆ; ಹೀಗಾಗಿ ಈ ಮೂರ್ತಿಯ ಈ ಪರಿ ‘ವಿಸರ್ಜನೆ’ಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ ಎಂದ ಅವರು ಹೇಳಿದ್ದಾರೆ.
ಈ ಅನನ್ಯವಾದ ‘ದುಡ್ಡಿನ ಗಣೇಶ’ನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತಾದಿಗಳು ಗಣಪತಿ ಪೆಂಡಾಲ್‌ಗೆ ಧಾವಿಸುತ್ತಿದ್ದಾರೆ. ಕಲಾವಿದ ತಿಲ್ಲು ತಿವಾರಿ ಕಳೆದ ವರ್ಷ ೧,೧೦೦ ತೆಂಗಿನ ಕಾಯಿಗಳಿಂದ ಗಣೇಶ ವಿಗ್ರಹ ಜೋಡಿಸಿದ್ದರು.ಅದಕ್ಕೂ ಹಿಂದೆ ೨೦೧೭ರಲ್ಲಿ ಚೆಂಡು, ಕ್ರಿಕೆಟ್ ಬ್ಯಾಟ್ ಮತ್ತು ರಾಕೆಟ್ ಮತ್ತಿತರ ವಿವಿಧ ಕ್ರೀಡಾ ಸಾಮಗ್ರಿಗಳಿಂದ ಗಣಪತಿ ನಿರ್ಮಿಸಿದ್ದರು.

Leave a Comment