ನೊಂದ ಜೀವಗಳಿಗೆ ಸ್ಪಂದಿಸುವುದೇ ಮಾನವ ಧರ್ಮ: ಕೇಮಾರುಶ್ರೀ

ಉಪ್ಪಿನಂಗಡಿ, ಸೆ.೮- ಎಲ್ಲಾ ಧಾರ್ಮಿಕ ಕ್ಷೇತ್ರಗಳು ಸಮಾಜದಲ್ಲಿ ಜ್ಞಾನವನ್ನು ಪಸರಿಸುವಂತಹ ಕೇಂದ್ರಗಳಾಗಿ ಮಾರ್ಪಡಬೇಕು. ಎಲ್ಲರೂ ಧರ್ಮದ ತಿರುಳನ್ನು ಅರಿತು ಸಾಮರಸ್ಯದಿಂದ ಬಾಳಿದರೆ ನಮ್ಮ ನಾಡಿನಲ್ಲಿ ಶಾಂತಿ, ಸೌಹಾರ್ದತೆಯನ್ನು ಬೆಳೆಸಬಹುದೆಂದು, ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಮಠಾದೀಶರಾದ ಶ್ರೀಈಶ ವಿಠಲದಾಸ ಸ್ವಾಮೀಜಿ ಕರೆ ನೀಡಿದರು.
ಅವರು ಉಪ್ಪಿನಂಗಡಿಯ ಕೆ.ಎಮ್.ಶಾಫಿ ಮೆಮೋರಿಯಲ್ ಪಬ್ಲಿಕ್ ಲೈಬ್ರರಿ ಮತ್ತು ಶಾಂತಿ ಸೆಂಟರ್ ಉದ್ಘಾಟನೆ ಹಾಗೂ ಸದ್ಭಾವನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ದೀನದಲಿತರ, ನೊಂದಜೀವಿಗಳ ಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಮಾನವ ಧರ್ಮವೆಂದು ಅವರು ಹೇಳಿದರು. ಶಾಂತಿ ಸೆಂಟರ್ ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯರು, ಆಯಿಶಾ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷರೂ ಆಗಿರುವ ಡಾ.ಅಬ್ದುಲ್ ಮಜೀದ್ ಮಾತನಾಡುತ್ತಾ, ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳಸಿ ತಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಬೇಕೆಂದು ತಿಳಿಸಿದರು. ಕೆ.ಎಂ. ಶಾಫಿ ಮೆಮೋರಿಯಲ್ ಲೈಬ್ರರಿಯನ್ನು ಉದ್ಘಾಟಿಸಿದ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡುತ್ತಾ, ಜ್ಞಾನವೇ ಮಾನವನ ಬದುಕಿಗೆ ಆಭರಣವಾಗಿದೆ. ಸಾಹಿತ್ಯಗಳು ಸಮಾಜದಲ್ಲಿ ಶಾಂತಿ ನೆಲೆಸುವುದರಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ರಾಜಕೀಯ ವೈಚಾರಿಕತೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಇರಬಹುದಾದರೂ, ಎಲ್ಲರೂ ಪರಸ್ಪರ ಅರಿತು ಪ್ರೀತಿಯಿಂದ ಬಾಳಿದರೆ ಶಾಂತಿಯ ವಾತಾವರಣ ಇಲ್ಲಿ ಖಂಡಿತಾ ಬೆಳೆದುಬರುತ್ತದೆ ಎಂದರು. ಸದ್ಭಾವನಾ ಸಂದೇಶವನ್ನು ನೀಡಿದ ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಧರ್ಮಗಳ ನೈಜ್ಯಸಂದೇಶವನ್ನು ಅರಿಯದವರೇ ಧರ್ಮರಕ್ಷಕರಾಗಲು ಹೊರಟಿರುವುದು ಸಮಾಜದ ದುರಂತ. ಇಂತಹ ಶಕ್ತಿಗಳಿಂದ ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಬೇಕೆಂದು ಎಂದು ಹೇಳಿದರು. ಫಾದರ್ ಅಬೆಲ್ ಲೋಬೋ ಮಾತನಾಡುತ್ತಾ ಸ್ವಾರ್ಥ ಧರ್ಮಾಂದತೆಯನ್ನು ತೊರೆದು ನಿಷ್ಕಳಂಕ ಹೃದಯದಿಂದ ಬಾಳಿದರೆ ದೇವಪ್ರೀತಿ ಪ್ರಾಪ್ತವಾಗುತ್ತದೆ ಎಂದು ನುಡಿದರು. ಜಮಾಅತೆ ಇಸ್ಲಾಮಿ ವಲಯ ಸಂಚಾಲಕ ಅಬ್ದುಸ್ಸಲಾಮ್ ಯು. ಸಮಾರೋಪ ನುಡಿಗಳನ್ನಾಡಿದರು. ಕೇಂದ್ರ ಜುಮಾ ಮಸೀದಿ ಇದರ ಅಧ್ಯಕ್ಷ ಹಾಜಿ ಮುಸ್ತಪಾ ಕೆಂಪಿ ಹಾಗು ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಅಧ್ಯಕ್ಷ ದಿವಾಕರ್ ಆಚಾರ್ಯ ಅವರು ಶುಭ ಹಾರೈಸಿದರು. ಡಾ. ರಘು ಬಿ. ತೌಸೀಫ್ ಯು.ಬಿ., ಅಬ್ದುಲ್ ಲತೀಫ್ ಕೆ.ಎಚ್, ಚಿದಾನಂದ ಗೌಡ, ಪ್ರಶಾಂತ್ ಉಪಸ್ಥಿತರಿದ್ದರು. ಅಮಾನ್ ಅಹ್ಸನ್ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಅಬ್ದುಲ್ ಹಸೀಬ್ ಕುರ್ ಆನ್ ಪಠಿಸಿದರು. ಜಲೀಲ್ ಮುಕ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment