ನೊಂದವರಿಗಾಗಿ ಶ್ರಮಿಸುವ ವಿಶಿಷ್ಠ ಸೇವಾ ಸಂಸ್ಥೆ ತುಮಕೂರು ರೋಟರಿ

ತುಮಕೂರು, ಮಾ. ೧೪- ಸಮಾಜದಲ್ಲಿನ ದೀನ ದಲಿತರು, ನೊಂದು ಬೆಂದವರ ಸೇವೆಗಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆದೊಯ್ಯುವ ಕಾಳಜಿಯಿಂದ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ರೋಟರಿ ಸಂಸ್ಥೆಯು ವಿಶಿಷ್ಟ ಸೇವಾ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ವರ್ಗದ, ಎಲ್ಲಾ ರೀತಿಯ ಕಾಯಕವನ್ನು ಮಾಡುವ ಗೌರವಾನ್ವಿತ ವ್ಯಕ್ತಿಗಳಿಗೆ ಸದಸ್ಯರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದೆ ಎಂದು ರೋಟರಿ ತುಮಕೂರು ಅಧ್ಯಕ್ಷ ಡಾ. ಶಿವಶಂಕರ ಕಾಡದೇವರಮಠ ಹೇಳಿದರು.

ಇಲ್ಲಿನ ಹನುಮಂತಪುರದ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ರೋಟರಿ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಮಧುಮೇಹ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 60 ವರ್ಷಗಳ ಹಿಂದೆ ಸ್ಥಾಪಿತವಾದ ತುಮಕೂರು ರೋಟರಿ ಪ್ರಥಮ ಅಧ್ಯಕ್ಷರು ಅಂದಿನ ಜಿಲ್ಲಾಧಿಕಾರಿಗಳಾದ ನರಸಿಂಹಯ್ಯ ಅಯ್ಯಂಗಾರ್. ತುಮಕೂರು ರೋಟರಿಯ ಸೇವೆಯನ್ನು ಕಂಡು ಸದಸ್ಯರಾದರು. ನಮ್ಮ ಜಿಲ್ಲೆಯ ನಾನಾ ಭಾಗದಲ್ಲಿ ರೋಟರಿ ಸಂಸ್ಥೆಗಳು ಪ್ರಾರಂಭವಾಗಿ ಎಲ್ಲಾ ರೋಟರಿ ಸಂಸ್ಥೆಗಳ ತಾಯಿಬೇರು ತುಮಕೂರು ರೋಟರಿ ಸಂಸ್ಥೆಯಾಗಿದೆ ಎಂದರು.

ರೋಟರಿ ತುಮಕೂರು ತನ್ನ ವಜ್ರಮಹೋತ್ಸವದ ಅಂಗವಾಗಿ ತುಮಕೂರು ಹಾಗೂ ಹೊರಭಾಗದ ಸ್ಥಳಗಳಲ್ಲಿ ಉಚಿತವಾಗಿ ಮಧುಮೇಹ ತಪಾಸಣೆ ಕಾರ್ಯಕ್ರಮವನ್ನು ಪ್ರತಿ ಭಾನುವಾರ ಬೆಳಿಗ್ಗೆ 7.30 ರಿಂದ 8.30 ರವರೆಗೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಶಿಬಿರವನ್ನು ಉದ್ಘಾಟಿಸಿದ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ನಾನು ಬಹಳ ವರ್ಷಗಳಿಂದ ರೋಟರಿಯ ಜತೆ ಒಡನಾಡಿಯಾಗಿದ್ದೇನೆ. ಬಹಳಷ್ಟು ಶಾಲೆಗಳಿಗೆ ಡೆಸ್ಕ್‌ಗಳನ್ನು ನನ್ನ ಸಮ್ಮುಖದಲ್ಲೇ ವಿತರಿಸಿದ್ದಾರೆ. ಬಹಳಷ್ಟು ಮಹನೀಯರು ಈ ರೋಟರಿ ಸಂಸ್ಥೆಗಾಗಿ ಶ್ರಮಿಸಿದ್ದಾರೆ. ಆರೋಗ್ಯ ತಪಾಸಣಾ ಕಾರ್ಯವು ಜನಸಾಮಾನ್ಯರಿಗೆ ಮುಟ್ಟುವ ಕೆಲಸವಾಗಿದೆ. ನಿರಂತರವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದಷ್ಟು ಗ್ರಾಮೀಣ ಪ್ರದೇಶದ ಬಡಜನರಿಗೆ ಕಾರ್ಯಕ್ರಮದ ಸೌಲಭ್ಯಗಳು ತಲುಪಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಒಳ್ಳೊಳ್ಳೆಯ ಕೆಲಸಗಳು ರೋಟರಿ ಸಂಸ್ಥೆಯಿಂದ ಆಗುತ್ತಿವೆ. ಇನ್ನೂ ಉತ್ತಮವಾಗಿ ಬಡಜನರ ಏಳ್ಗೆಗಾಗಿ ಸಂಸ್ಥೆಯು ಶ್ರಮಿಸಲಿ ಎಂದು ಹಾರೈಸಿದರು.

ಡಾ. ಸುನೀಲ್ ಹಾಗೂ ಡಾ. ವೀರೇಶ್ ಕಲ್ಮಠ್‍ರವರು ಮಾತನಾಡಿ ಈ ವೈದ್ಯಕೀಯ ಸೇವೆಯನ್ನು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ. ಮಹೇಶ್, ರೋ. ಎಂ.ಎಸ್.ಉಮೇಶ್, ರೋ. ಪಿ.ಕಾಂತಿಲಾಲ್, ರೋ. ಕೆ.ಎಸ್.ವಿಶ್ವನಾಥ್, ರೋ. ಮಲ್ಲೇಶಯ್ಯ, ರೋ. ಶಿವಣ್ಣ ಮಲ್ಲಸಂದ್ರ, ರೋ. ವೆಂಕಟಸ್ವಾಮಿ, ರೋ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಮದುಮೇಹ ತಪಾಸಣಾ ಶಿಬಿರವು ಡಾ. ವೀರೇಶ್ ಕಲ್ಮಠ್ ಹಾಗೂ ಡಾ. ಸುನೀಲ್‍ಕುಮಾರ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯದರ್ಶಿ ರೋ. ಜಿ.ಎನ್.ಮಹೇಶ್ ವಂದಿಸಿದರು.

Leave a Comment