ನೈಸರ್ಗಿಕ ವಿಸ್ಮಯ ಆರೋರಾ

ಧೃವ ಪ್ರದೇಶಗಳಲ್ಲಿ ದಿಗಂತದ ಅಂಚಿನಲ್ಲಿ ಕಾಣಿಸುವ ಪ್ರಜ್ವಲ ಬಣ್ಣದ ಹೊಂಬೆಳಕೆ ಭೂಕಾಂತ ಧ್ರವ ಪ್ರಭೆ (ಆರೋರಾ.) ಆಕಾಶ ಅಂಚಿನ ವಿಸ್ತಾರ ಭಾಗದಲ್ಲಿ ಹಸಿರು, ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳಿಂದ ಕೂಡಿದ ಈ ಉಜ್ವಲ ಕಾಂತಿ ನೈಸರ್ಗಿಕ ವಿಸ್ಮಯಗಳಲ್ಲಿ ಒಂದು. ಈ ಬೆಳಕಿನ ವಿಸ್ಮಯ ಉತ್ತರ ಗೊಲಾರ್ಧಲ್ಲಾದರೆ ಅದನ್ನು ಆರೋರಾ ಬೊಲಾರಿಸ್ ಎಂತಲೂ ದಕ್ಷಿಣ ಗೊಲಾರ್ಧದಲ್ಲಿ ಆದರೆ ಅದನ್ನು ಆರೋರಾ ಅಸ್ಟ್ರಾಲಿಸ್ ಎಂತಲೂ ಕರೆಯಲಾಗುತ್ತದೆ.

ಈ ಬಣ್ಣ ಬಣ್ಣದ ಹೊಂಬೆಳಕು 80 ರಿಂದ 150 ಕಿ.ಲೋ ಮೀಟರ್ ಎತ್ತರದಲ್ಲಿ ಕಾಣಿಸುತ್ತದೆ. ಮತ್ತು ಕೆಲವು ಆಕಾರಗಳನ್ನು ಹೊಂದಿರುತ್ತದೆ. ಕೆಲವು ಕಮಾನು ಆಕಾರದ ಪರದೆಯ ರೂಪದಲ್ಲಿದ್ದರೆ ಇನ್ನು ಕೆಲವು ಕಿರಣಗಳ ರೂಪದಲ್ಲಿ ಇರುತ್ತದೆ. ಈ ಹೊಂಬೆಳಕಿಗೆ ಪ್ರಮುಖ ಕಾರಣ ವಾಯು ಮಂಡಲದಲ್ಲಿಯ ಮೇಲುಸ್ತರದಲ್ಲಿ ವಿದ್ಯುತ್ ಶಕ್ತಿ ಉತ್ಪತ್ತಿಯಾಗುವುದು. ಈ ಉಜ್ವಲ ಬೆಳಕಿಗೂ ಭೂಮಿಯ ಆಯಸ್ಕಾಂತ ಕ್ಷೇತ್ರಕ್ಕೂ ಒಂದು ರೀತಿಯ ಸಂಬಂಧವಿದೆ ಎಂಬುದನ್ನು ಮೊದಲಿಗೆ ಇಂಗ್ಲೆಡ್‌ನ ಖಗೋಳ ವಿಜ್ಞಾನಿ ಎಡ್ಮಂಡ್ ಹ್ಯಾಲಿ ರುಜುವಾತು ಪಡೆಸಿದರು.

ಉರಿಯುವ ಚಂಡಾಗಿರುವ ಸೂರ್ಯನಲ್ಲಿ ನಿರಂತರವಾಗಿ ಶಾಖ ಉತ್ಪತ್ತಿಯಾಗುತ್ತಿರುತ್ತದೆ. ಇದರಿಂದ ಪ್ರೊಟ್ರಾನ್ಸ್ ಮತ್ತು ಎಲೆಕ್ಟ್ರಾನ್ಸ್ ಮುಂತಾದ ವಿದ್ಯುತ್ ವಾಹಿ ಕಣಗಳು ಸತತವಾಗಿ ಬಿಡುಗಡೆಯಾಗುತ್ತಿರುತ್ತವೆ. ಹೀಗೆ ಈ ಕಣಗಳು ಬಿಡುಗಡೆಯಾಗುವುದನ್ನು ಸೌರ ಗಾಳಿ ಎನ್ನುತ್ತೇವೆ. ಈ ಕಣಗಳು ಸೆಕೆಂಡಿಗೆ 480 ಕಿ.ಮೀ. ವೇಗದಲ್ಲಿ ಎಲ್ಲಾ ದಿಕ್ಕುಗಳಲ್ಲಿ ಸಂಚರಿಸುತ್ತವೆ. ಈ ಕಣಗಳು ಭೂ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿನ ಆಯಸ್ಕಾಂತಿಯ ಶಕ್ತಿ ಈ ಕಣಗಳು ಸಂಚರಿಸುವ ದಿಕ್ಕನ್ನು ಮತ್ತು ವೇಗವನ್ನು ಬದಲಾಯಿಸುತ್ತದೆ.

ಹೀಗೆ ದಿಕ್ಕೆಟ್ಟ ಕಣಗಳು ಅತ್ಯಂತ ತಣ್ಣಗಿರುವ ಭೂಮಂಡಲದ ಮೇಲಿನ ತೆಳುವಾದ ವಾತಾವರಣದಲ್ಲಿ ಗಾಳಿಯ ಅತಿ ಸೂಕ್ಷ್ಮ ಕಣಗಳಿಗೆ ಬಡಿಯುತ್ತವೆ. ಆಗ ಉಂಟಾಗುವ ಬೆಳಕೆ ಆರೋರಾ.

ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ಕಾಣುವ ಬಣ್ಣದ ಹೊಂಬೆಳಕು ನಿಸರ್ಗ ವಿಸ್ಮಯಗಳಲ್ಲಿ ಒಂದು. ಈ ನಯನ ಮನೋಹರ ಹೊಂಬೆಳಕಿಗೆ ಕಾರಣ ವಾಯು ಮಂಡಲದಲ್ಲಿಯ ಮೇಲುಸ್ತರದಲ್ಲಿ ವಿದ್ಯುತ್ ಶಕ್ತಿ ಉತ್ಪತ್ತಿಯಾಗುವುದು. ಸೂರ್ಯನಿಂದ ಉತ್ಪತ್ತಿಯಾಗುವ ಪ್ರಕರ ಬೆಳಕಿನ ಕಿರಣಗಳಲ್ಲಿಯ ಪ್ರೊಟ್ರಾನ್ಸ್ ಮತ್ತು ಎಲೆಕ್ಟ್ರಾನ್ಸ್ ಕಣಗಳು ಭೂವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ಧೃವಗಳಲ್ಲಿಯ ಆಯಸ್ಕಾಂತ ಶಕ್ತಿ ಈ ಕಣಗಳ ದಿಕ್ಕನ್ನು ಮತ್ತು ವೇಗವನ್ನು ಬದಲಾಯಿಸುತ್ತದೆ. ಹೀಗೆ ದಿಕ್ಕು ಕಳೆದುಕೊಂಡು ಚಲಿಸುವ ಕಣಗಳು ತಣ್ಣಗಿರುವ ಮೇಲಿನ ತೆಳುವಾದ ವಾತಾವರಣದಲ್ಲಿ ಗಾಳಿಯ ಅತಿ ಸೂಕ್ಷ್ಮ ಕಣಗಳಿಗೆ ಬಡಿಯುವ ಪ್ರಕಿಯೆಯಿಂದ ಈ ಹೊಂಬೆಳಕು ಉತ್ಪತ್ತಿಯಾಗುತ್ತದೆ.

– ಉತ್ತನೂರು ವೆಂಕಟೇಶ್

 

Leave a Comment