‘ನೈಟಿ ಹಾಕ್ಕೋಬೇಡ’ ಅಂತಾರೆ ಕಿಚ್ಚ

ಬೆಂಗಳೂರು, ನ ೧೨ – ಸ್ಯಾಂಡಲ್‌ವುಡ್ ಸ್ಟಾರ್ ಸುದೀಪ್ ಸಕಲಕಲಾವಲ್ಲಭ ಅಂದ್ರೆ ಅತಿಶಯೋಕ್ತಿಯೇನಲ್ಲ  ಅಭಿನಯ, ವಾಕ್ಚಾತುರ್ಯು, ಪಾಕಪ್ರಾವೀಣ್ಯತೆ, ಗಾಯನ. . .ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಳ್ಳಬಲ್ಲರು  ಇದೀಗ ಈ ಕಿಚ್ಚ ’ನೈಟಿ ಹಾಕ್ಕೋಬೇಡ’ ಅಂತ ಹೇಳಲಿದ್ದಾರೆ

ಗೋಕುಲ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ.ಹೆಚ್ ಅವರು ನಿರ್ಮಿಸುತ್ತಿರುವ  ಹಾಗೂ ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣ ಟಾಕೀಸ್‘ ಚಿತ್ರಕ್ಕಾಗಿ ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಅವರು ಬರೆದಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕ‘ ಎಂಬ ಹಾಡಿನ ಟ್ರ್ಯಾಕ್ ಕೇಳಿರುವ ಕಿಚ್ಚ ಸುದೀಪ್ ಈ ಹಾಡನ್ನು ತಾವೇ ಹಾಡುವುದಾಗಿ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಹಾಡಲಿದ್ದಾರೆ

ಆಕ್ಷನ್ ಕಟ್ ಹೇಳಿರುವ ವಿಜಯಾನಂದ್  ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು  ಬರೆದಿದ್ದಾರೆ.  ೨೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಆನಂದ ಪ್ರಿಯ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.

    ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ, ಮದನ್ – ಹರಿಣಿ,  ಭೂಷಣ್  ನೃತ್ಯ ನಿರ್ದೇಶನ, ವಿಕ್ರಂ ಸಾಹಸ ನಿರ್ದೇಶನ  ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಜಯ್ ರಾವ್, ಅಪೂರ್ವ, ಚಿಕ್ಕಣ್ಣ, ಸಿಂಧೂಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭ್ರಾಜ್, ಮಂಡ್ಯ ರಮೇಶ್,  ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮೀಗೌಡ, ಯಮುನ, ಧರ್ಮೇಂದ್ರ ಅರಸ್ ಮುಂತಾದವರಿದ್ದಾರೆ.  ಲಾಸ್ಯ ನಾಗರಾಜ್ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.

Leave a Comment