ನೇಪಾಳದಲ್ಲಿ ಮೋದಿ

ಕಠ್ಮಂಡು, ಆ. ೩೦- ದಕ್ಷಿಣ ಏಷ್ಯಾ ವಲಯದ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ವೃದ್ಧಿಸಿಕೊಳ್ಳುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿಗೆ ಆಗಮಿಸಿದ್ದಾರೆ. ಈ ವಲಯದ ನೆರೆ ರಾಷ್ಟ್ರಗಳಿಂದ ಕೂಡಿರುವ ಬಿಮ್ಸ್‌ಟೆಕ್ ಶೃಂಗಸಭೆಯಲ್ಲಿ ಭಾಗವಹಿಸುವ ಮುಖ್ಯ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಬಿಮ್ಸ್‌ಟೆಕ್ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆ ಮಹತ್ವದ ಚರ್ಚೆ ನಡೆಸುವುದು ಈ ಭೇಟಿಯ ಒಟ್ಟಾರೆ ಉದ್ದೇಶವಾಗಿದೆ.
ನೆರೆ ರಾಷ್ಟ್ರಗಳೊಂದಿಗೆ ಪ್ರಾಂತೀಯ ಸಂಪರ್ಕ ಮತ್ತು ವಾಣಿಜ್ಯ ವ್ಯವಹಾರ ವೃದ್ಧಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತ ಚರ್ಚೆಯೇ ಈ ಶೃಂಗದ ಮುಖ್ಯ ಉದ್ದೇಶ.
ಬೇ ಆಫ್ ಬೆಂಗಾಲ್ ಇನ್‌ಷಿಯೇಟಿವ್ಸ್ ಫಾರ್ ಮಲ್ಟಿ ಸ್ಪೆಕ್ಟ್ರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ಸ್ ಕೋಪರೇಷನ್ (ಬಿ.ಐ.ಎಂ.ಎಸ್.ಟಿ.ಇ.ಸಿ) ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ 2 ದಿನಗಳ ಕಾಲ ನಡೆಯುತ್ತಿದ್ದು, ಈ ಸಮಾವೇಶದಲ್ಲಿ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭಾರತ, ಮಯನ್ಮಾರ್, ಶ್ರೀಲಂಕಾ, ಥಾಯ್ಲೆಂಡ್ ಮತ್ತು ನೇಪಾಳ ಭಾಗವಹಿಸುತ್ತಿವೆ.
`ನೆರೆ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದೇ ತಮ್ಮ ಭೇಟಿಯ ಉದ್ದೇಶ’ ಎಂದು ಪ್ರಧಾನಿ ಮೋದಿ ಕಠ್ಮಂಡುಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಚರ್ಚಿಸುತ್ತ ಹೇಳಿದ್ದಾರೆ. ಹಾಗೆಯೇ, ಶೃಂಗದ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.
ನೇಪಾಳ ಸಂಬಂಧಕ್ಕೆ ಮಹತ್ವ
ಭದ್ರತೆಯ ವ್ಯೂಹಾತ್ಮಕ ದೃಷ್ಠಿಯಿಂದ ನೆರೆಯ ನೇಪಾಳ ಭಾರತಕ್ಕೆ ಅತಿ ಮಹತ್ವವಾಗಿದೆ. ನೇಪಾಳದ ಪ್ರಧಾನಿ ಕೆ.ಪಿ ಶರ್ಮಾವೊಲಿಯೊಂದಿಗೆ ಭಾರತ-ನೇಪಾಳ ಸಂಬಂಧಗಳ ಕುರಿತು ಮಹತ್ವದ ಚರ್ಚೆಯನ್ನು ಪ್ರಧಾನಿ ನ‌ಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಐತಿಹಾಸಿಕ ಪಶುಪತಿನಾಥ ದೇವಾಲಯ ಸಂಕೀರ್ಣದಲ್ಲಿ ಭಾರತ-ನೇಪಾಳ ಮೈತ್ರಿ ಧರ್ಮಶಾಲಾವನ್ನು ಪ್ರಧಾನಿ ಮೋದಿ ಮತ್ತು ಕೆ.ಪಿ. ಶರ್ಮಾವೊಲಿ ಒಟ್ಟಿಗೆ ಉದ್ಘಾಟನೆ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.

Leave a Comment