ನೇಪಥ್ಯಕ್ಕೆ ಸರಿದ ಕಾರ್ನಾಡ್ : ಜ್ಞಾನಪೀಠ ಪುರಸ್ಕೃತ, ನಟ, ನಾಟಕಕಾರ ಇಂದು ಬೆಳಿಗ್ಗೆ ವಿಧಿವಶ

ಬೆಂಗಳೂರು, ಜೂ ೧೦- ಕನ್ನಡ ಸಾರಸ್ವತ ಲೋಕದ ದಿಗ್ಗಜ, ಹಾಗೂ ಬಹುಭಾಷಾ ನಟ, ನಾಟಕಕಾರ, ಪ್ರಗತಿಪರ ಚಿಂತಕ, ಸಮತಾವಾದಿಯ ಪ್ರತಿಪಾದಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ರಘುನಾಥ್ ಕಾರ್ನಾಡ್ (81) ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

  • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ
  •  ಅನಾರೋಗ್ಯದಿಂದಾಗಿ 81 ನೇ ವಯಸ್ಸಿನಲ್ಲಿ ಕೊನೆ ಉಸಿರು
  •  ಪುತ್ರ, ಪುತ್ರಿ ಸೇರಿ ಹಲವರನ್ನು ಅಗಲಿದ ಕಾರ್ನಾಡ್
  •  ಕನ್ನಡಕ್ಕೆ 7ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಮೆ
  •  ನಾಟಕಗಳಲ್ಲಿ ಬದುಕು ಮತ್ತು ಜೀವನ ತೆರೆದಿಟ್ಟಿದ್ದ ಕಾರ್ನಾಡ್
  •  ಪಂಚ ಭಾಷೆಗಳಲ್ಲಿ ನಟನೆ, ನಿರ್ದೇಶನದಿಂದಲೂ ಗಮನ ಸೆಳೆದಿದ್ದ ಕಾರ್ನಾಡ್

ಕಾರ್ನಾಡ್ ಅವರ ಪಾರ್ಥೀವ ಶರೀರವನ್ನು ಬೈಯಪ್ಪನಹಳ್ಳಿಯ ಕಲ್ಲಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಯಾವುದೇ ವಿಧಿ ವಿಧಾನವಿಲ್ಲದೆ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸಿನಿಮಾ ನಾಟಕದ ಜೊತೆ ಜೊತೆಗೆ ಸಾಹಿತ್ಯ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಗಿರೀಶ್ ಕಾರ್ನಾಡ್, ತಮ್ಮ ನೇರ ನಡೆನುಡಿಗಳಿಂದ ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದು ಉಂಟು, ಆದರೂ ಯಾವುದಕ್ಕೂ ಅಂಜದೇ ತಮ್ಮ ನಿಲುವನ್ನು ಪ್ರತಿಪಾದಿಸುತ್ತಿದ ಧೀಮಂತ ವ್ಯಕ್ತಿ ಗೀರಿಶ್ ಕಾರ್ನಾಡ್, ಓರ್ವ ಪುತ್ರ ಹಾಗೂ ಪುತ್ರಿ ಹಾಗೂ ಅಸಂಖ್ಯಾತ ಅಭಿಮಾನಿಯನ್ನು ಅಗಲಿದ್ದಾರೆ.

ದೀರ್ಘಕಾಲದ ಅನಾರೋಗ್ಯ, ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಕಾರ್ನಾಡ್ ಅವರ ಅಗಲಿಕೆಗೆ ಸಿನಿಮಾ, ರಂಗಭೂಮಿ, ಸಾಹಿತ್ಯ ಲೋಕದ ದಿಗ್ಗಜರು ತೀವ್ರ ಕಂಬನಿ ಮಿಡಿದಿದ್ದಾರೆ.

ಗಿರೀಶ್ ಕಾರ್ನಾಡ್ ಅವರ ನಾಟಕಕಗಳಲ್ಲಿ ಬದುಕು ಮತ್ತು ಜೀವನದ ಹಲವು ಘಟ್ಟಗಳನ್ನು ಪರಿಚಯ ಮಾಡಿಕೊಡುವ ಮೂಲಕ ತೀವ್ರ ವಿರೋಧ ಟೀಕೆಗೂ ಗುರಿಯಾಗಿದ್ದರು. ಆದರೂ ಹೇಳುವುದನ್ನು ಸ್ಪಷ್ಟವಾಗಿ ಮತ್ತು ನಿಖರವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು.

ಗಿರೀಶ್ ಕಾರ್ನಾಡ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಜಕಾರಣಿಗಳು ಹಾಗೂ ಸಾಹಿತಿಗಳಿಗೆ ನಿರ್ಬಂಧ ಹೇರಲಾಗಿತ್ತು. ಕಾರ್ನಾಡ್‌ರವರು ರಚಿಸಿದ್ದ ಅನೇಕ ನಾಟಕಕಗಳು, ಸಿನಿಮವಾಗಿ ತೆರೆಬಂದಿವೆ. ಅಲ್ಲದೆ ಇಂಗ್ಲಿಷ್ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭಾಷಾಂತರವಾದ ಹೆಗ್ಗಳಿಕೆ ಪಡೆದಿದೆ.

ಕನ್ನಡಕ್ಕೆ 7ನೇ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಗಿರೀಶ್ ಕಾರ್ನಾಡ್ ಅಗಲಿಕೆಯ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಸೇರಿದಂತೆ ಸಿನಿಮಾ ರಂಗಭೂಮಿ ಹಲವು ದಿಗ್ಗಜರು ತೀವ್ರ ಸಂತಾಪ ಸೂಚಿಸಿದರು.

1970ರಲ್ಲಿ ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಗಿರೀಶ್ ಕಾರ್ನಾಡ್ ನಟಿಸಿದ್ದ ಮೊದಲ ಚಿತ್ರಕ್ಕೆ ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು. 1974ರಲ್ಲಿ ಪದ್ಮಶ್ರೀ ಹಾಗೂ 1992ರಲ್ಲಿ ಪದ್ಮಭೂಷಣ ಪ್ರಶಸ್ತಿ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ರೋಡ್ಸ್ ಸ್ಕಾಲರ್ ಶಿಪ್ ಸೇರಿ ಹತ್ತು ಹಲವು ಪ್ರಶಸ್ತಿ ಭಾಜನರಾಗಿದ್ದಾರೆ.

1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನಾದಲ್ಲಿ ಡಾ.ರಘುನಾಥ ಕಾರ್ನಾಡ್, ಹಾಗೂ ಕೃಷ್ಣಬಾಯಿ ದಂಪತಿಯ ಪುತ್ರನಾಗಿ ಜನಿಸಿದ ಗಿರೀಶ್ ಕಾರ್ನಾಡ್, ಉತ್ತರ ಕನ್ನಡದ ಶಿರಸಿಯಲ್ಲಿ ಬಾಲ್ಯ ಶಿಕ್ಷಣ ಧಾರಾವಾಡದಲ್ಲಿ ಪದವಿ, ಹಾಗೂ ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಬಳಿಕ ಚೆನ್ನೈ ನ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಪ್ರೆಸ್ ನಲ್ಲಿ 7 ವರ್ಷ ಕೆಲಸ ಮಾಡಿ ಅಮೇರಿಕಾದ ಚಿಕಾಗೋ ಅತಿಥಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವೆಲ್ಲದರ ನಡುವೆಯೂ ನಾಟಕ ಬರಹದಲ್ಲಿ ತೊಡಗಿಸಿಕೊಂಡಿದ್ದ ಗಿರೀಶ್ ಕರ್ನಾಡ್, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
1980ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ವಿವಾಹವಾಗಿದ್ದ ಗಿರೀಶ್ ಕಾರ್ನಾಡ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2011 ರಲ್ಲಿ “ಆಡಾಡತ ಆಯುಷ್ಯ” ಆತ್ಮ ಕಥೆಯನ್ನು ರಚಿಸಿದ್ದರು.

ಕನ್ನಡ, ಹಿಂದಿ, ಮರಾಠಿ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಟನೆ, ನಿರ್ದೇಶನದ ಮೂಲಕ ಗಮನ ಸೆಳೆದಿದ್ದರು. ಇದಲ್ಲದೇ ತುಘಲಕ್, ಯಯಾತಿ, ಹಯವದನ, ಅಗ್ನಿ ಮತ್ತು ಮಳೆ, ನಾಗಮಂಡಲ, ಸೇರಿ ಹಲವು ನಾಟಕಗಳನ್ನು ರಚಿಸಿದ್ದರು.

ನಾಗಮಂಡಲ, ಜನಪದ ಕಥೆಯಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಇದು ಮನುಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದ ನಾಟಕ ಇದಾಗಿತ್ತು. ಮುಂದೆ 1997ರಲ್ಲಿ ಟಿ.ಎಸ್.ನಾಗಭರಣ ನಿರ್ದೇಶನದಲ್ಲಿ ಅದೇ ಹೆಸರಲ್ಲಿ ಚಿತ್ರವಾಗಿ ಮೂಡಿ ಬಂದಿತ್ತು.

ಮಹಾಭಾರತದ “ಯಯಾತಿ” ಮೇಲೆ ಬರೆದ ನಾಟಕ “ಯಯಾತಿ” ವಿವಾಹಿತರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲು ಕತೆಯ ಮೇಲೆ ಬೆಳಕು ಚೆಲ್ಲಿತ್ತು. ನೆಹರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವ್ಯಸನಗೊಂಡ ಕಥೆಯನ್ನು “ತುಘಲಕ್” ನೊಂದಿಗೆ ಸಮೀಕರಿಸಿ ಐತಿಹಾಸಿಕ ತುಘಲಕ್ ನಾಟಕ ರಚಿಸಿದ್ದರು. ಕಥಾಸರಿತ್ಸಾಗರದ ಕಥೆಯಧಾರಿತ “ಹಯವದನ” ಮನುಷ್ಯನ ಅಪೂರ್ಣತೆ ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತ್ತು.

12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಬಸವಾದಿ ಪ್ರಥಮರ ಮೇಲೆ ನಡೆದ ದಬ್ಬಾಳಿಕೆ, ಕಗ್ಗೊಲೆ ಗಳನ್ನು ತಲೆದಂಡದ ಮೂಲಕ ತೆರೆದಿಟ್ಟರೆ ಅಂಜು ಮಲ್ಲಿಗೆ ನಾಯಕದ ಮೂಲಕ ಸೋದರ, ಸೋದರಿಯರ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲಿತ್ತು.

ನವ್ಯ ಸಾಹಿತ್ಯ ಚಳವಳಿಯ ಅತ್ಯುತ್ತಮ ನಾಟಕಗಳಲ್ಲಿ ಗುರುತಿಸಿಕೊಂಡಿದ್ದ ತಬ್ಬಲಿ ನಿನಾದೆ ಮಗನೇ, ಒಂದಾನೊಂದು ಕಾಲದಲ್ಲಿ, ಕಾಡು, ಸಂಸ್ಕಾರ, ವಂಶವೃಕ್ಷ, ಮೊದಲಾದ ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿ ಹೆಸರು ಗಳಿಸಿದ್ದರು.

ಸರ್ಕಾರಿ ಗೌರವ ಕುಟುಂಬದ ನಿರಾಕರಣೆ
ಸಕಲ ಸರ್ಕಾರಿ ಗೌರವಗಳಿಂದ ಅಂತ್ಯ ಸಂಸ್ಕಾರ ನೆರವೇರಿಸಲು ರಾಜ್ಯ ಸರ್ಕಾರ ಮುಂದಾಗಿರುವ ನಡೆಯನ್ನು ಕುಟುಂಬ ತಿರಸ್ಕರಿಸಿ ಸರಳವಾಗಿ ಯಾವುದೇ ವಿಧಿ ವಿಧಾನವಿಲ್ಲದೇ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ
ಕುಟುಂಬದ ಸದಸ್ಯರು ಒಪ್ಪಿದರೇ ಅಂತ್ಯಕ್ರಿಯೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಕಛೇರಿ ಮೂಲಗಳು ತಿಳಿಸಿವೆ.

ಕಲ್ಪಳ್ಳಿಯಲ್ಲಿ ಅಂತ್ಯಕ್ರಿಯೆ
ಸರಳ ವಿಧಿ ವಿಧಾನದ ಮೂಲಕ ಬೈಯಪ್ಪನಹಳ್ಳಿಯ ಕಲ್ಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ. ಗಿರೀಶ್ ಕಾರ್ನಾಡ್‌ರವರ ಕೊನೆ ಆಸೆಯಂತೆ ಅಂತಿಮ ಸಂಸ್ಕಾರ ನಡೆಸಲು ಕುಟುಂಬ ಮುಂದಾಗಿದೆ.

ಮೃತ ಸಾಹಿತಿಗಳನ್ನು ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸುವ ಬಗ್ಗೆ ಈ ಹಿಂದೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾವಿನಲ್ಲೂ ರಾಜಕೀಯ ಬೇಡ ಎಂದು ಪತ್ನಿ ಡಾ. ಸರಸ್ವತಿಯವರಿಗೆ ಗಿರೀಶ್ ಕಾರ್ನಾಡ್ ತಿಳಿಸಿದ್ದರು ಎನ್ನಲಾಗಿದ್ದು, ಅದರಂತೆ ಗೌರವ ನೀಡಲು ಕುಟುಂಬ ಸದಸ್ಯರು ಮುಂದಾಗಿದ್ದಾರೆ.

Leave a Comment