ನೇತ್ರಾವತಿ ಸೇತುವೆ ಬಳಿ ತಂದೆ-ಮಗು ನಾಪತ್ತೆ

ಉಳ್ಳಾಲ, ಫೆ.೧೬- ತಂದೆ ಮತ್ತು ಆರು ವರ್ಷದ ಮಗ ರಾಷ್ಟ್ರೀಯ ಹೆದ್ದಾರಿ ೬೬ರ ನೇತ್ರಾವತಿ ಸೇತುವೆ ಬಳಿ ರವಿವಾರ ಬೆಳಗ್ಗಿನ ಜಾವ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನಾಪತ್ತೆಯಾಗಿರುವವರನ್ನು ಗೋಪಾಲಕೃಷ್ಣ ರೈ(೪೫) ಮತ್ತು ನಮೀಶ್ ರೈ(೬) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಬಂಟ್ವಾಳ ಬಾಳ್ತಿಲ ನಿವಾಸಿಗಳೆಂದು ಹೇಳಲಾಗಿದೆ. ಸದ್ಯ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಕೊಣಾಜೆಯ ಪಾವೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುವ ನೇಮೋತ್ಸವಕ್ಕಾಗಿ ಎರಡು ದಿನಗಳ ಹಿಂದೆ ಪತ್ನಿ, ಮಗನ ಜೊತೆ ಆಗಮಿಸಿದ್ದರೆನ್ನಲಾಗಿದೆ. ಆದರೆ ಕಳೆದ ರಾತ್ರಿ ೨:೩೦ ಗಂಟೆ ಸುಮಾರಿಗೆ ಗೋಪಾಲಕೃಷ್ಣ ರೈ ಪುತ್ರ ನಮೀಶ್ ಜೊತೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಆದರೆ ಇಂದು ಬೆಳಗ್ಗಿನ ಜಾವ ಅವರ ಕಾರು ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ. ಮಹಾರಾಷ್ಟ್ರ ನೋಂದಣಿಯ ಈ ಕಾರಿನಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇವರಿಬ್ಬರು ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಹುಡುಕಾಟ ಮುಂದುವರಿದಿದೆ.

Leave a Comment