ನೇತ್ರಾವತಿ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ: ಸುಸೈಡ್ ಸ್ಪಾಟ್ ಆಗುತ್ತಿರುವ ಬಗ್ಗೆ ಆತಂಕ

ಮಂಗಳೂರು, ಸೆ.೧೧- ಉಳ್ಳಾಲ ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ನಗರದ ಉರ್ವಾ ನಿವಾಸಿ ಸದಾಶಿವ ನದಿಗೆ ಹಾರಿದ ಯುವಕ ಎಂದು ತಿಳಿದುಬಂದಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಭಾರೀ ಸಂಖ್ಯೆಯ ಕುತೂಹಲಿಗರು ಜಮಾಯಿಸಿದ್ದು ಪೊಲೀಸ್, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸದಾಶಿವ ತನ್ನ ಬೈಕ್ ಅನ್ನು ಸೇತುವೆ ಬಳಿ ನಿಲ್ಲಿಸಿ ಚೀಟಿ ಬರೆದಿಟ್ಟು ನದಿಗೆ ಹಾರಿದ್ದಾನೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಬೈಕ್ ಮತ್ತು ಪತ್ರವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ.
ನೇತ್ರಾವತಿ ನದಿ ಸೇತುವೆ ಇತ್ತೀಚಿನ ದಿನಗಳಲ್ಲಿ ‘ಸುಸೈಡ್ ಸ್ಪಾಟ್’ ಆಗಿ ಬದಲಾಗಿದ್ದು ಇಲ್ಲಿ ಬಂದು ಸಾವಿಗೆ ಶರಣಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ತಿಂಗಳು ‘ಕೆಫೆ ಕಾಫಿ ಡೇ’ ಮಾಲಕ ಸಿದ್ದಾರ್ಥ್ ಆತ್ಮಹತ್ಯೆಗೆ ಶರಣಾಗುವ ಮೂಲಕ ನೇತ್ರಾವತಿ ಸೇತುವೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿಗೆ ಶರಣಾಗಿತ್ತು. ಈ ವೇಳೆ ಜನಪ್ರತಿನಿಧಿಗಳು ಇಲ್ಲಿ ಸಿಸಿ ಕೆಮರಾ ಅಳವಡಿಸುವುದಾಗಿ ಹೇಳಿದ್ದರೂ ಅದಿನ್ನೂ ಮಾತಿನಲ್ಲೇ ಬಾಕಿಯಾಗಿದೆ.

Leave a Comment