ನೆಹರೂ,  ಶಾಸ್ತ್ರಿಗಿಂತ ಮೋದಿ ಬಲಿಷ್ಠ ಆಡಳಿತ: ಕೃಷ್ಣಾ

ಬೆಂಗಳೂರು, ಏ 16- ಪ್ರಧಾನಿ ನರೇಂದ್ರ ಮೋದಿ ನೆಹರೂ, ಶಾಸ್ತ್ರಿ ಅವರಿಗಿಂತ ಹೆಚ್ಚು  ಗಮನ ಕೊಟ್ಟು ಬಲಿಷ್ಠ ಆಡಳಿತ ನೀಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ  ಹೇಳಿದ್ದಾರೆ.

ಬೆಂಗಳೂರಿನ ನ  ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಯಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ದೇಶದ  ಜನತೆ ಸ್ಥಿರ ಸರ್ಕಾರ ನೋಡಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ  ರಿಮೋಟ್ ಕಂಟ್ರೋಲ್ ಇತ್ತು, ಆದರೆ ನರೇಂದ್ರ ಮೋದಿ ಸರ್ಕಾರದಲ್ಲಿ ರಿಮೋಟ್ ಇರಲಿಲ್ಲ ಎಂದು ಹೇಳಿದರು.

ಮತದಾನದ ಹಿಂದೆ ಮುಂದೆ ರಜೆ ಇರುವ ಕಾರಣ ಮತದಾರರು ಓಟು ಹಾಕುವುದನ್ನು ಮರೆಯಬಾರದು ಎಂದು ಹಿರಿಯ ರಾಜಕಾರಣಿಯೂ ಆಗಿರುವ ಕೃಷ್ಣ, ಎರಡು ದಿನ ನಡೆಯಲಿರುವ ಲೋಕಸಭಾ ಚುನಾವಣೆ ವಿಶ್ವದ ಗಮನ ಸೆಳೆದಿರುವ  ಚುನಾವಣೆ ಎಂಬುದನ್ನು ಮತದಾರರು ಅರಿಯಬೇಕು ಎಂದು ಅವರು ಮನವಿ ಮಾಡಿದರು.

ಜನಭರಿತ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಅಮೆರಿಕಾ ಸಂಪತ್‌ ಭರಿತ‌ಪ್ರಜಾಪ್ರಭುತ್ವ. ನಮ್ಮದು ಜನ‌ಭರಿತ ಪ್ರಜಾ ಪ್ರಭುತ್ವದಲ್ಲಿ  ವಿವಿಧ ಭಾಷೆ, ಸಂಸ್ಕೃತಿಯ ದೇಶವಾಗಿದೆ ಎಂದರು.

ನಗರ ಪ್ರದೇಶಗಳಲ್ಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತ ಚಲಾಯಿಸುವ ಗೋಜಿಗೆ ಹೋಗುವುದಿಲ್ಲ. ಈ‌ ಬಾರಿ ಮತದಾನದ ಹಿಂದೆ ಮುಂದೆ ರಜೆ ಇರುವುದರಿಂದ ಮತಚಲಾಯಿಸದೆ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಆತಂಕವವನ್ನು ಅವರು ವ್ಯಕ್ತಪಡಿಸಿದರು.

ಮೋದಿ ಅವರು  ಸಂಪುಟದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸುತ್ತಾರೆ. ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ದೇಶದ  ಪ್ರಗತಿ ವೇಗವಾಗಿ ಸಾಗಲಿದೆ  ಎಂದು ಹೇಳಿದರು.

ಸ್ವಚ್ಛತೆ ಕಾರ್ಯಕ್ರಮ ಹೊಸದಲ್ಲ, ಹಳೆಯ ಕಾರ್ಯಕ್ರಮ ನಿಜ,  ಹಿಂದಿನವರು ಅದಕ್ಕೆ  ಬಾಯ್ಮಾತಿನ ಅನುಕಂಪ ತೋರುತ್ತಿದ್ದರು. ಆದರೆ ಹೆಚ್ಚಿನ ಮಹತ್ವ ನೀಡಿರಲಿಲ್ಲ. ನರೇಂದ್ರ ಮೋದಿ ಅದಕ್ಕೆ ಒತ್ತು ಕೊಟ್ಟು ಸಾಮಾಜಿಕ‌ ಬದಲಾವಣೆ ತಂದಿದ್ದಾರೆ ಎಂದು ಹೇಳಿದರು.

 ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ಬಂದಿದೆ. ತೆರಿಗೆ ಪದ್ಧತಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.  ಹಿಂದೆ ಕಾಂಗ್ರೆಸ್ ಸಹ ಮಾಡಿರಲಿಲ್ಲ. ಇಚ್ಛಾಶಕ್ತಿ ಇಲ್ಲದ ಕಾರಣ ಅನೇಕ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ದೇಶದಲ್ಲಿ ಏಕ ರೂಪ ತೆರಿಗೆ ವಿನ್ಯಾಸ ಮಾಡಿದ್ದಾರೆ ಎಂದು ಸಾಧನೆ ವಿವರಿಸಿದರು.

ರಕ್ಷಣಾ  ವಲಯಕ್ಕೆ ಮೋದಿ ಮಹತ್ವ ಕೊಟ್ಟಿದ್ದಾರೆ. ಪೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಕಾಲ ಘಟ್ಟದಿಂದಲೂ ನೋಡುತ್ತಿದ್ದೇನೆ. ಇಂತಹ ಪ್ರಮಾಣದ ಸ್ವಾತಂತ್ರ್ಯವನ್ನು‌ ಸೇನಾ ಪಡೆಗಳಿಗೆ ನೀಡಿರಲಿಲ್ಲ. ಗಡಿಗಳಲ್ಲಿ ದೇಶ ರಕ್ಷಣೆಗಾಗಿ ಪ್ರತಿರೋಧ ತೋರಿಸುವುದಕ್ಕೆ ಹಿಂದಿಗಿಂತಲೂ ಈಗ ಹೆಚ್ಚು ಅವಕಾಶ ಮತ್ತು ಸ್ವಾತಂತ್ರ್ಯ ನೀಡಲಾಗಿದೆ ಎಂದು ಎಸ್‌.ಎಂ.ಕೃಷ್ಣ ಹೇಳಿದರು.

 

Leave a Comment