ನೆರೆ ಹಾವಳಿ ಮನೆ ನಿರ್ಮಾಣ 5 ಲಕ್ಷ ರೂ. ಬಿಡುಗಡೆ ಸಂಜೆ ಆದೇಶ

ಬೆಂಗಳೂರು, ಸೆ. ೧೨- ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ತಕ್ಷಣವೇ 1 ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಲಾಗಿದ್ದು, ಈ ಸಂಬಂಧ ಇಂದು ಸಂಜೆ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶೃಂಗೇರಿಯ ಶಾರದಾಂಭೆ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಲು ಇಂದು ಬೆಳಿಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮುಖ್ಯಮಂತ್ರಿಗಳು ಮೆಣಸೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನೆರೆ ಸಂತ್ರಸ್ಥರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳನ್ನು ನೀಡುವ ಸಂಬಂಧ ಇಂದು ಆದೇಶ ಹೊರಬೀಳಲಿದೆ. ಮನೆ ಅಡಿಪಾಯಕ್ಕಾಗಿ ತಕ್ಷಣವೇ 1 ಲಕ್ಷ ರೂ. ನೀಡಲಾಗುವುದು. ಉಳಿದ 4 ಲಕ್ಷ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ನೆರೆ ಸಂತ್ರಸ್ಥರಿಗೆ ಎಲ್ಲ ರೀತಿಯ ಸಹಾಯಹಸ್ತ ಚಾಚಿದ್ದರೂ ಕಾಂಗ್ರೆಸ್ಸಿನವರು ಪ್ರತಿಭಟನೆ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ. ಪ್ರತಿಪಕ್ಷವಾಗಿ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಈ ಪ್ರತಿಭಟನೆ ಮಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ನೆರೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ವರದಿ ಪಡೆದುಕೊಂಡಿದೆ. ಸದ್ಯದಲ್ಲೇ ನೆರವು ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ನೆರೆ ಪರಿಹಾರ ಕಾರ್ಯಗಳಿಗೆ ಹಣ ಒದಗಿಸಲು ಸಾಲಮನ್ನಾ ಸೇರಿದಂತೆ ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗುವುದು ಎಂಬ ವರದಿಗಳು ನಿರಾಧಾರ, ಯಾವುದೇ ಕಾರ್ಯಕ್ರಮಗಳು ನಿಂತಿಲ್ಲ ಎಂದು ಅವರು ಹೇಳಿದರು.
ಶೃಂಗೇರಿ ಶಾರದಾಂಭೆ ಮತ್ತು ಜಗದ್ಗುರುಗಳ ದರ್ಶನ ಪಡೆದು ಬಹಳ ದಿನಗಳಾಗಿತ್ತು. ಹಾಗಾಗಿ ಇಂದು ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಗೌರಿ ಗದ್ದೆಗೂ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಮಾಜಿ ಸಚಿವ ಜೀವ್‌ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment