ನೆರೆ ಹಾವಳಿ ಅಧ್ಯಯನಕ್ಕೆ ಕೇಂದ್ರ ತಂಡ ಪ್ರಧಾನಿ ಭರವಸೆ

(ನಮ್ಮ ಪ್ರತಿನಿಧಿಯಿಂದ)

ನವದೆಹಲಿ, ಸೆ. ೧೦-  ಕೊಡಗು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವಷ್ಠಿಯಿಂದಾಗಿರುವ ಹಾನಿಯನ್ನು ಖುದ್ದಾಗಿ ವೀಕ್ಷಿಸಲು ಕೂಡಲೇ ಕೇಂದ್ರದ ತಂಡ ಕಳುಹಿಸಲು ಪ್ರಧಾನಿ ನರೇಂದ್ರ ಮೋದಿ ಸಮ್ಮತಿಸಿದ್ದಾರೆ.

ಭಾರಿ ಮಳೆಯಿಂದ ಆಗಿರುವ ಅತಿವೃಷ್ಠಿ ಹಾನಿಯನ್ನು ಸಮೀಕ್ಷೆ ಮಾಡಲು ಕೂಡಲೇ ಕೇಂದ್ರದ ಎರಡು ಅಧಿಕಾರಿಗಳ ತಂಡ ಕಳುಹಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಇಂದು ಅವರ ಕಛೇರಿಯಲ್ಲಿ ಭೇಟಿ ಮಾಡಿ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ 7 ಜಿಲ್ಲೆಗಳು ಸೇರಿದಂತೆ 15 ಜಿಲ್ಲೆಗಳಲ್ಲಿ ಅತಿವೃಷ್ಠಿ, ಒಳನಾಡಿನ ಕೆಲ ಜಿಲ್ಲೆಗಳಿಂದ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೊಡಗು ಸೇರಿದಂತೆ ಅತಿವೃಷ್ಟಿಯಿಂದ ತೊಂದರೆಗೊಳಗಾಗಿರವ ಜಿಲ್ಲೆಗಳಲ್ಲಿ ಪುನರ್ ವಸತಿ ಮತ್ತು ಪರಿಹಾರ ಕಾರ್ಯಗಳಿಗೆ 2 ಸಾವಿರ ಕೋಟಿ ರೂ.ಗಳ ಪ್ಯಾಕೇಜ್‌ನ್ನು ಘೋಷಿಸುವಂತೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ ಮನವಿಗೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ಕೊಡಗು ಮತ್ತು ನೆರೆಯ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾಗಿ ಜನ ಹಾಗೂ ಜಾನುವಾರುಗಳು ಜೀವ ಕಳೆದುಕೊಂಡಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಕಳೆದ 118 ವರ್ಷಗಳಲ್ಲಿ ದಾಖಲೆಯೆಂಬಂತೆ ಮಳೆ ಆಗಿರುವುದರಿಂದ ಅಪಾರ ನಷ್ಟ ಸಂಭವಿಸಿದೆ. ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳಿಗೆ ಹಾನಿ ಜತೆಗೆ ಮೂಲ ಸೌಕರ್ಯ, ಮನೆಗಳಿಗೂ ಧಕ್ಕೆಯಾಗಿದೆ. ಅತಿವೃಷ್ಟಿಯಿಂದಾಗಿ ಈ ಜಿಲ್ಲೆಗಳಲ್ಲಿ ಒಟ್ಟು 3,705.87 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪುನರ್ ವಸತಿ, ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೊಡಗು ಮತ್ತಿತರ ಜಿಲ್ಲೆಗಳಿಗೆ ನೆರವು ನೀಡುವಂತೆ ಮನವಿ ಸಲ್ಲಿಸಿದರು.

17 ಜಿಲ್ಲೆಗಳಲ್ಲಿ ಬರ

ರಾಜ್ಯದಲ್ಲಿ ಒಂದೆಡೆ ಅತಿವೃಷ್ಠಿಯಾದರೇ ಕರ್ನಾಟಕದ ಒಳನಾಡಿನ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಬರ ಹಾನಿಯ ಬಗ್ಗೆ ಅಂದಾಜು ಮಾಡ‌ಲಾಗುತ್ತಿದೆ. ನಾಳೆ ಸಂಪುಟ ಉಪಸಮಿತಿ ಸಭೆ ಪ್ರಸ್ತಾನೆಯನ್ನು ಅಂತಿಮಗೊಳಿಸಲಿದೆ ಅದರಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿಯೂ ನಿಯೋಗ ಪ್ರಧಾನಿ ಅವರಿಗೆ ತಿಳಿಸಿತು.

ಅತಿವೃಷ್ಠಿ ಹಾಗೂ ಬರ ಸಂದರ್ಭದಲ್ಲಿ ರಾಜ್ಯದ ನೆರವಿಗೆ ಬರುವಂತೆಯೂ ನಿಯೋಗ ಮನವಿ ಮಾಡಿತು.

ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಈ ನಿಯೋಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಇದ್ದರು.

ಬಿಜೆಪಿ ಗೈರು

ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಲು ಸರ್ವ ಪಕ್ಷ ಮುಖಂಡರು ನಿಯೋಗದೊಂದಿಗೆ ತೆರಳಬೇಕಾಗಿತ್ತಾದರೂ ಬಿಜೆಪಿ ಮುಖಂಡರುಗಳು ರಾಜ್ಯದ ನಿಯೋಗದಿಂದ ಅಂತರ ಕಾಯ್ದುಕೊಂಡಿದ್ದರಿಂದ ರಾಜ್ಯದ ಸಚಿವರುಗಳು, ಕಾಂಗ್ರೆಸ್, ಜೆಡಿಎಸ್ ಸಂಸದರು ಮಾತ್ರ ನಿಯೋಗದಲ್ಲಿ ಇದ್ದರು.

ಬಿಜೆಪಿ ಮುಖಂಡರು ಈ ನಿಯೋಗದಲ್ಲಿ ಪ್ರಧಾನಿಗಳನ್ನು ಭೇಟಿ ಮಾಡುವುದಿಲ್ಲ. ಈಗಾಗಲೇ ಬಿಜೆಪಿ ಕೇಂದ್ರ ಸಚಿವರು ಹಾಗೂ ಸಂಸದರು ಪ್ರಧಾನಿಗಳಿಗೆ ರಾಜ್ಯದ ಅತಿವೃಷ್ಠಿ ಹಾಗೂ ಬರಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಧಾನಿಗಳು ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ಹಾಗಾಗಿ ನಿಯೋಗದಲ್ಲಿ ತೆರಳುವ ಅಗತ್ಯವಿಲ್ಲ ಎಂದು ಬಿಜೆಪಿ ಮುಖಂಡರುಗಳು ನಿಯೋಗದಲ್ಲಿ ಪಾಲ್ಗೊಳ್ಳಲಿಲ್ಲ.

Leave a Comment