ನೆರೆ ಸಂತ್ರಸ್ತರ ಪರಿಹಾರ ವಿಳಂಬ : ಉಸ್ತುವಾರಿ ಸಚಿವರಿಗೆ ಶಾಸಕರಿಂದಲೇ ತರಾಟೆ

* ಅಸಮರ್ಪಕ ಪ್ರವಾಹ ನಷ್ಟ ಮಾಹಿತಿ : ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಸಮಾಧಾನ
ರಾಯಚೂರು.ಅ.15- ಕೃಷ್ಣಾ ಮತ್ತು ತುಂಗಭದ್ರಾ ಭೀಕರ ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬಕ್ಕೆ ಸಂಬಂಧಿಸಿ ತೀವ್ರ ಅಸಮಾಧಾನಗೊಂಡ ಎಲ್ಲಾ ಶಾಸಕರು ಒಕ್ಕೊರಳಿನಿಂದ ಉಸ್ತುವಾರಿ ಸಚಿವ ಶ್ರೀರಾಮುಲು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಕ್ಷ ಬೇಧ ಮರೆತು, ನೆರೆ ಪರಿಹಾರ ವಿಳಂಬದ ವಿರುದ್ಧ ಅಸಮಾಧಾನಗೊಂಡ ಶಾಸಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಸಭೆಗೆ ಬಂದ ಅಧಿಕಾರಿಗಳಿಗೆ ಕನಿಷ್ಟ ನೆರೆಯಿಂದ ಉಂಟಾದ ನಷ್ಟದ ಮಾಹಿತಿ ಹೊಂದಿಲ್ಲ. ಜಿಲ್ಲಾಧಿಕಾರಿಗಳ ಖಾತೆಗೆ 17 ಕೋಟಿ ಹಣವಿರುವ ಲೆಕ್ಕಪತ್ರ ನೀಡಲಾಗುತ್ತಿದೆ. ಆದರೆ, ಸಂತ್ರಸ್ತರಿಗೆ ಇಲ್ಲಿವರೆಗೂ ಪರಿಹಾರ ನೀಡದೇ, ಇರುವುದಕ್ಕೆ ಎಲ್ಲಾ ಶಾಸಕರು ಭಾರೀ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನೆರೆಯಿಂದ ನಷ್ಟವಾಗಿರುವ ಸಂಪೂರ್ಣ ಮಾಹಿತಿ ಲಭ್ಯವಿದ್ದರೂ, ಸಭೆಯಲ್ಲಿ ಯಾರು ಸಮರ್ಪಕವಾಗಿ ಒದಗಿಸುತ್ತಿಲ್ಲ. ನೆರೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿಯ ವಾಸ್ತವತೆಯನ್ನು ಅರಿಯದೇ, ಕೇವಲ ಕಛೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸಿದ್ದಾರೆ ಎನ್ನುವುದಕ್ಕೆ ಅವರು ನೀಡಿದ ಮಾಹಿತಿಯೇ ನಿದರ್ಶನವಾಗಿದೆ. ಈ ರೀತಿ ಪರಿಹಾರ ಕಾಮಗಾರಿ ಕೈಗೊಂಡರೇ, ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯವೇ?
ಗ್ರಾಮಾಂತರ ಶಾಸಕ ದದ್ದಲ ಬಸವನಗೌಡ ಅವರು ಮಾತನಾಡುತ್ತಾ, ಕಳೆದ ಎರಡು ತಿಂಗಳ ಹಿಂದೆ ಬಂದ ನೆರೆಯಲ್ಲಿ ಬೆಳೆ ನಷ್ಟಕ್ಕೆ ಗುರಿಯಾದ ರೈತರಿಗೆ ಎನ್‌ಡಿಆರ್ಎಫ್ ನಿಯಮದನ್ವಯ 13,500 ರೂ. ಹೆಕ್ಟರ್‌ಗೆ ಪರಿಹಾರ ನೀಡಬೇಕೆಂದು ಸ್ಪಷ್ಟವಾಗಿದ್ದರೂ, ಇಲ್ಲಿವರೆಗೂ ಹಣ ಬಿಡುಗಡೆಗೊಂಡಿಲ್ಲ. ಗುರ್ಜಾಪೂರು 2009 ರಲ್ಲಿ ಕಟ್ಟಿದ ಮನೆಗಳು ಸಂಪೂರ್ಣ ಶಿಥಿಲಗೊಂಡಿವೆ. ಈ ಎಲ್ಲಾ ನೆಲಸಮ ಮಾಡಿ, ಪುನರ್ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಮಾತನಾಡುತ್ತಾ, ಪರಿಹಾರ ವಿತರಣೆಗೆ ಅನುದಾನ ಲಭ್ಯವಿರುವಾಗ ಯಾವುದೇ ವಿಳಂಬ ನೀತಿ ಅನುಸರಿಸದೇ, ತಕ್ಷಣವೇ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು. ಹಕ್ಕುಪತ್ರಗಳನ್ನು ಲಾಟರಿ ಮೂಲಕ ವಿತರಿಸಬೇಕೆಂದ ಅವರು, ದಿನಾಂಕ ನಿಗದಿ ಪಡಿಸಲು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಮಾತನಾಡುತ್ತಾ, ನೆರೆಗೆ ಸಂಬಂಧಿಸಿ ಜಿಲ್ಲಾಡಳಿತದಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಜಮಾ ಮಾಡಲಾಗಿದೆ. ಆದರೆ, ಪರಿಹಾರ ವಿತರಿಸಬೇಕಾದ ಜಿಲ್ಲಾಡಳಿತ ಎನ್‌ಡಿಆರ್ಎಫ್ ಹಣಕ್ಕಾಗಿ ಕಾಯುವ ಅಗತ್ಯವೇನಿದೆಂದು ಪ್ರಶ್ನಿಸಿದ ಅವರು, ಬೇರೆ ಜಿಲ್ಲೆಗಳಲ್ಲಿ ನೆರೆ ಪರಿಣಾಮ ತೀವ್ರವಾಗಿದೆ. ಆ ಜಿಲ್ಲೆಗಳಿಗೆ ಹೋಲಿಕೆ ಮಾಡದೇ, ಜಿಲ್ಲೆಯಲ್ಲಿ ಅಗತ್ಯವಿರುವ ಪರಿಹಾರ ಕಾಮಗಾರಿ ಕೈಗೊಳ್ಳಬೇಕು.
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡುತ್ತಾ, ಮಾನ್ವಿಯಲ್ಲಿ ಕುರಿಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿ, ಕೆಡಿಪಿ ಸಭೆಯ ವರದಿಯಲ್ಲಿ ಉಲ್ಲೇಖಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಅವರು ಮಾತನಾಡುತ್ತಾ, ಮಳೆಯಿಂದ ತಮ್ಮ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ರಸ್ತೆಗಳು ನಷ್ಟವಾಗಿವೆ. ಸೇತುವೆಗಳು ಕುಸಿತು ಬಿದ್ದಿವೆ. ಇವೆಲ್ಲವುಗಳ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಡಿಸಿಗೆ ಸೂಚಿಸುವಂತೆ ಹೇಳಿದರು.
ಶಾಸಕರ ಈ ಅಸಮಾಧಾನವನ್ನು ಗಂಭೀರ ಪರಿಗಣಿಸಿದ ಸಚಿವ ಶ್ರೀರಾಮುಲು ಅವರು ಮುಂದಿನ ಒಂದು ವಾರದವರೆಗೆ ಪರಿಹಾರ ಕಾಮಗಾರಿಗಳ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಶಾಸಕರೊಂದಿಗೆ ಸಭೆ ನಡೆಸಿ, ಪರಿಹಾರ ಕಾಮಗಾರಿಗಳ ಮಾಹಿತಿ ಪಡೆದು ತಕ್ಷಣವೇ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದರುಗಳಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಸಿಇಓ ಲಕ್ಷ್ಮೀಕಾಂತ ರೆಡ್ಡಿ, ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment