ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದ ಸ್ವಾಮೀಜಿ

ಹರಪನಹಳ್ಳಿ.ಆ.14; ರಾಜ್ಯದಲ್ಲಿ ಜಲಪ್ರಳಯದಿಂದ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸಿರುವ ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಅವರು ಜೋಳಿಗೆ ಹಿಡಿದು ಹಣ, ಧಾನ್ಯ, ಬಟ್ಟೆ ಸೇರಿ ಇತರ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತೆಗ್ಗಿನಮಠ ಶ್ರೀಗಳ ನೇತೃತ್ವದಲ್ಲಿ ಹಾಗೂ ಶ್ರೀಮಠದ ಸಂಸ್ಥೆಗಳಾದ ಎಸ್‍ಸಿಎಸ್ ಔಷಧ ಮಹಾವಿದ್ಯಾಲಯ, ಭಂಗಿ ಬಸಪ್ಪ ಪಿಯು ಕಾಲೇಜ್‍ನ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರೊಂದಿಗೆ   ಆರಂಭವಾದ ಪಾದಯಾತ್ರೆ ಹೊಸಪೇಟೆ ರಸ್ತೆ ಮಾರ್ಗವಾಗಿ ಹೊಸ ಬಸ್ ನಿಲ್ದಾಣ, ಬಣಗಾರಪೇಟೆ, ಮೇಗಳಪೇಟೆ, ಕೊಟ್ಟೂರು ರಸ್ತೆ, ಹರಿಹರ ರಸ್ತೆ, ಗೌಳೇರ ಓಣಿ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಣ, ಧಾನ್ಯ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸ್ವೀಕರಿಸಲಾಯಿತು. ಸುಮಾರು 2 ಗಂಟೆಗಳ ಕಾಲ ಜಿನುಗುತ್ತಿದ್ದ ಮಳೆಯಲ್ಲಿಯೇ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆ ಮಾಡಿದರು.ಈ ಸಂದರ್ಭದಲ್ಲಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈಗಾಗಲೇ ಮೈದೂರು ಗ್ರಾಮದಿಂದ ಜೋಳದ ರೊಟ್ಟಿ, ಅಕ್ಕಿ, ಜೋಳ ಆಹಾರ ಪದಾರ್ಥ ಸ್ವೀಕರಿಸಲಾಗಿದೆ. 15 ಪ್ಯಾಕೇಟ್ ಅಕ್ಕಿ, 6 ಚೀಲ ಜೋಳ ಸಂಗ್ರಹವಾಗಿವೆ. ಶ್ರೀಮಠದವತಿಯಿಂದ 25 ಸಾವಿರರೂ ನಗದು ಹಾಗೂ ದಾನಿಗಳಿಂದ ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು. ನೆರೆ ಸಂತ್ರಸ್ತರಿಗೆ ನೆರವು ನೀಡಲು ಶ್ರೀಮಠದ ಭಕ್ತಾದಿಗಳು, ಸಹೃದಯಿಗಳು, ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಬಟ್ಟೆಗಳು, ಹೊದಿಕೆ ಹಾಗೂ ಇನ್ನಿತರ ದಿನನಿತ್ಯದ ಬಳಕೆ ವಸ್ತುಗಳು, ಔಷಧಿಗಳು ಹಾಗೂ ಹಣ ಸಹಾಯ ಮಾಡುವವರು ಆ.14 ಸಂಜೆಯೊಳಗೆ ತೆಗ್ಗಿನಮಠಕ್ಕೆ ನೀಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು. ಎಸ್‍ಸಿಎಸ್ ಔಷಧ ಮಹಾವಿದ್ಯಾಲಯ ಪ್ರಾಚಾರ್ಯ ನಾಗೇಂದ್ರರಾವ್, ಭಂಗಿ ಬಸಪ್ಪ ಪಿಯು ಕಾಲೇಜ್ ಪ್ರಾಚಾರ್ಯ ಅರುಣಕುಮಾರ್ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಇದ್ದರು.

Leave a Comment