ನೆರೆ ಪರಿಹಾರ ಕಾಮಗಾರಿ ವಿಶೇಷ ಪ್ಯಾಕೇಜ್ ಶೀಘ್ರ ಘೋಷಣೆ

ಶಿವಮೊಗ್ಗ, ಆ. ೧೩- ಪ್ರವಾಹ ಸಂತ್ರಸ್ಥರು ಯಾರೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ ಎಂದು ನೆರೆ ಸಂತ್ರಸ್ಥರಿಗೆ ಧೈರ್ಯ ತುಂಬಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹದಿಂದ ವಸತಿ ಕಳೆದುಕೊಂಡಿರುವ ಪುನರ್ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಪ್ರವಾಹದಿಂದ ತೊಂದರೆಗೊಳಗಾಗಿರುವವರಿಗೆ ಪುನರ್ ವಸತಿ ಕಲ್ಪಿಸುವುದು ಮೊದಲ ಆದ್ಯತೆ. ಸುಮಾರು 40 ಸಾವಿರ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಬೇಕಿದೆ. ಬೇರೆ ಕಾರ್ಯಕ್ರಮಗಳಿಗೆ ಹಣ ಕಡಿಮೆ ಮಾಡಿ ಪ್ರವಾಹ ಸಂತ್ರಸ್ಥರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸದ್ಯದಲ್ಲೇ ವಿಶೇಷ ಪ್ಯಾಕೇಜ್ ಘೋಷಿಸಿ ರಸ್ತೆ, ಸೇತುವೆಗಳ ದುರಸ್ತಿಗೂ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಶಿವಮೊಗ್ಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಹಾನಿಗೊಳಗಾಗಿರುವ ಕೃಷಿ ಭೂಮಿಯ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾಗಳಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ಎಲ್ಲರಿಗೂ ಪರಿಹಾರ ವಿತರಿಸಲಾಗುವುದು ಎಂದರು.
ಕೃಷಿಕರು ಕಂಗಾಲಾಗುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ರೈತರಿಗೆ ಎಲ್ಲ ನೆರವನ್ನೂ ಒದಗಿಸುತ್ತದೆ ಎಂದು ಹೇಳಿದರು.
ಶಿವಮೊಗ್ಗ ನಗರದಲ್ಲಿ ಮಳೆಯಿಂದ ತೊಂದರೆಗೆ ಒಳಗಾಗಿರುವವರಿಗೆ ತಕ್ಷಣಕ್ಕೆ ಪಾತ್ರೆ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು 10 ಸಾವಿರ ರೂ.ಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶಿವಮೊಗ್ಗದಲ್ಲಿ ಸುಮಾರು 1 ಸಾವಿರ ಕುಟುಂಬಗಳಿಗೆ ಈ ಪರಿಹಾರ ನೀಡಲಾಗುವುದು ಎಂದರು.
ಮಳೆಯಿಂದ ಭಾಗಶಃ ಹಾನಿಗೊಳಗಾಗಿರುವ ಮನೆಗಳ ದುರಸ್ತಿಗಾಗಿ 1 ಲಕ್ಷ ರೂ. ನೀಡಲಾಗುವುದು. ಮನೆ ವಾಸಕ್ಕೆ ಯೋಗ್ಯವಾಗಿಲ್ಲದಾದರೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಒದಗಿಸಿ ಸರ್ಕಾರದ ವತಿಯಿಂದಲೇ ಮನೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ರಾಜೀವ್‌ಗಾಂಧಿ ನಗರದ ಕೊಳಗೇರಿಯಲ್ಲಿ 2 ಅಂತಸ್ತುಗಳ ಅಪಾರ್ಟ್‌‌ಮೆಂಟ್ ಮಾದರಿಯ ವಸತಿ ಗೃಹಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಶಿವಮೊಗ್ಗ ನಗರದಲ್ಲಿ ಮಳೆಯಿಂದ ತೊಂದರೆಗೀಡಾಗಿರುವ ಜನರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಶಿವಮೊಗ್ಗ ನಗರ ಪಾಲಿಕೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿಯೂ ಅವರು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಭೇಟಿ ನೀಡಿ ಅಲ್ಲಿ ಪ್ರವಾಹದಿಂದ ಆಗಿರುವ ಹಾನಿಯನ್ನು ವೀಕ್ಷಿಸಿದರು.
ನಿನ್ನೆ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಇಂದು ಬೆಳಗ್ಗೆ 6.30ರ ವೇಳೆಗೆ ತೀರ್ಥಹಳ್ಳಿ ತಾಲ್ಲೂಕಿನ ಹೆಗಲಗತ್ತಿ ಗ್ರಾಮಕ್ಕೆ ಬೇಟಿ ನೀಡಿ ಅಲ್ಲಿ ಪ್ರವಾಹದಿಂದ ಆಗಿರುವ ಅನಾಹುತಗಳನ್ನು ವೀಕ್ಷಿಸಿದರು.
ಪ್ರವಾಹದಿಂದ ರೈತರ ಜಮೀನು ಕೊಚ್ಚಿ ಹೋಗಿರುವುದು, ಮನೆ ಬಿದ್ದಿರುವುದು ಎಲ್ಲವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು, ಸಂತ್ರಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ನಂತರ ಶಿವಮೊಗ್ಗ ನಗರದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬೇಟಿ ನೀಡಿದ ಅವರು, ಶಿವಮೊಗ್ಗ ನಗರದಲ್ಲಿ ತೆರೆಯಲಾಗಿರುವ ಗೋಶಾಲೆ, ಸಂತ್ರಸ್ಥರ ಪರಿಹಾರ ಕೇಂದ್ರಗಳಿಗೂ ಬೇಟಿ ನೀಡಿ ಅಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದರು. ನಂತರ ಶಿವಮೊಗ್ಗದ ಸರ್ವಸಿದ್ಧಿ ವಿನಾಯಕ ದೇವಾಲಯಕ್ಕೂ ಬೇಟಿ ನೀಡಿ ಪೂಜೆ ಸಲ್ಲಿಸಿದರು.
ಮುಖ್ಯಮಂತ್ರಿಗಳ ಜತೆ ಶಾಸಕರಾದ ಈಶ್ವರಪ್ಪ ಅರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಅಸ್ವತ್ಥನಾದ ರೈತ
ಮುಖ್ಯಮಂತ್ರಿಗಳು ಹೆಗಲಗತ್ತಿ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರವಾಹದಿಂದ ತನ್ನ ಎರಡು ತೋಟಗಳನ್ನು ಕಳೆದುಕೊಂಡಿರುವ ರೈತ ಮಂಜುನಾಥ ಅಸ್ವಸ್ಥನಾಗಿದ್ದು, ತಕ್ಷಣವೇ ಮುಖ್ಯಮಂತ್ರಿ ಜತೆಗಿದ್ದ ವೈದ್ಯರು ಆ ರೈತನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿದರು.
ಮಳೆಯಿಂದ ರೈತ ಮಂಜುನಾಥನ ಅಡಕೆ, ಬಾಳೆ ಸಂಪೂರ್ಣ ಕೊಚ್ಚಿ ಹೋಗಿದೆ.

Leave a Comment