ನೆರೆಸಂತ್ರಸ್ಥರ ಪರಿಹಾರ ಹೆಚ್ಚಳಕ್ಕೆ ಕಾಂಗ್ರೆಸ್ ಶಾಸಕರ ಆಗ್ರಹ

ಬೆಂಗಳೂರು, ಆ. ೨೪- ರಾಜ್ಯದ ನೆರೆ ಸಂತ್ರಸ್ತರಿಗೆ ಸರ್ಕಾರ ಈಗ ಘೋಷಣೆ ಮಾಡಿರುವ ಪರಿಹಾರವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ರಾಜ್ಯಕ್ಕೆ ದೊಡ್ಡ ಪ್ರಮಾಣದ ನೆರವು ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ನಿಯಮಗಳಂತೆ ಪರಿಹಾರ ನೀಡಿದರೆ ನೆರೆಸಂತ್ರಸ್ಥರ ಬದುಕು ಸರಿ ಹಾದಿಗೆ ಬರುವುದು ಹಾಗಾಗಿ ಅಸಾಧ್ಯ. ನಿಯಮಾವಳಿಗಳನ್ನು ಪಕ್ಕಿಟ್ಟು ನೆರೆ ಸಂತ್ರಸ್ಥರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯದಲ್ಲಿನ ನೆರೆ ಹಾವಳಿ ಪ್ರದೇಶಗಳಲ್ಲಿ ಮಾಜಿ ಸಚಿವ ಹಾಗೂ ಶಾಸಕರುಗಳಾದ ಎಂ.ಬಿ. ಪಾಟಿಲ್, ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಆನಂದ್ ನ್ಯಾಮೇಗೌಡ ಇವರುಗಳು ಕೈಗೊಂಡ ಪರಿವೀಕ್ಷಣೆಯ ವರದಿ ಮತ್ತು ನೆರೆ ಸಂತ್ರಸ್ತರ ಅಹವಾಲನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್, ನೇರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಸರ್ಕಾರ ಘೋಷಣೆ ಮಾಡಿರುವ 5 ಲಕ್ಷ ರೂ.ಗಳನ್ನು 10 ಲಕ್ಷರೂ.ಗಳಿಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಮಳೆಯಿಂದ ಮನೆಗಳು ನೆನೆದು ಶಿಥಿಲಗೊಂಡು ಬೀಳುತ್ತಿವೆ. ಇಂತಹವರಿಗೂ ಹೊಸ ಮನೆ ನಿರ್ಮಿಸಲು 10 ಲಕ್ಷ ರೂ. ಒದಗಿಸಬೇಕು. ಹಾಗೆಯೇ ನೆರೆಯಿಂದ ಮನೆಯಲ್ಲಿದ್ದ ಬಟ್ಟೆ-ಬರೆ, ಧವಸ- ಧಾನ್ಯ, ಪಾತ್ರೆ-ಪಗಡೆಗಳನ್ನು ಕಳೆದುಕೊಂಡವರಿಗೆ ತುರ್ತಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು 1 ಲಕ್ಷ ರೂ. ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದರು.

ನೆರೆಯಿಂದ ಜಾನುವಾರು ಕಳೆದುಕೊಂಡವರಿಗೆ ಕನಿಷ್ಠ 50 ಸಾವಿರ, ಆಡು, ಕುರಿ, ಮೇಕೆ ಕಳೆದುಕೊಂಡವರಿಗೆ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನೆರೆ ಪ್ರದೇಶದಲ್ಲಿ ಕಬ್ಬು, ತೊಗರಿ, ಇತರೆ ವಾಣಿಜ್ಯ ಬೆಳೆಗಳು ಹಾಳಾಗಿವೆ. ಹಾಗಾಗಿ ರೈತರಿಗೆ ಪ್ರತಿ ಎಕರೆಗೆ 1 ಲಕ್ಷ ರೂ. ಪರಿಹಾರವನ್ನು ನೀಡುವಂತೆಯೂ ಒತ್ತಾಯಿಸಿದರು.

ನೆರೆ ಪ್ರದೇಶಗಳಲ್ಲಿ ಮನೆ ಹಾಗೂ ನಿವೇಶನ ಇಲ್ಲದ ಸಂತ್ರಸ್ತರಿಗೆ 18×16 ಅಡಿ ಅಥವಾ 15×20 ಅಡಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅವರು ಹೇಳಿದರು.

ನೆರೆ ಪ್ರದೇಶದಲ್ಲಿನ ಸಂತ್ರಸ್ತರಿಗೆ ನರೇಗಾ ಯೋಜನೆಯಡಿ ಉದ್ಯೋಗ ಸೃಷ್ಟಿ ಮಾಡಿ ಒಂದು ವರ್ಷದವರೆಗೂ ಕನಿಷ್ಠ ಕೂಲಿ ನೀಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆಯಿಂದ 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದ್ದಾರೆ. ನಮ್ಮ ಪ್ರಕಾರ ಇನ್ನು ಹೆಚ್ಚು ನಷ್ಟವಾಗಿದೆ. ಹಾಗಾಗಿ ಸರ್ಕಾರ ನೆರೆ ಸಂತ್ರಸ್ತರ ಬದುಕು ಕಟ್ಟಿಕೊಡಲು ಇತರೆ ಅಭಿವೃದ್ಧಿ ಯೋಜನೆಗಳ ಹಣವನ್ನು ಬಳಸಬೇಕು. ಕೆಲ ಯೋಜನೆಗಳನ್ನು ಮುಂದೂಡಿ ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್, ಎಸ್‌ಡಿಆರ್ಎಫ್ ಅಡಿಯಲ್ಲಿ ನೆರವು ನೀಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ನೆರವು ನೀಡಬೇಕು ಎಂದರು.

ರಾಜ್ಯ ಸರ್ಕಾರ ಅಗತ್ಯವಿದ್ದರೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡ ಹಾಗೆಯೆ ನೆರೆ ಸ್ಥಿತಿಯ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಒಂದು ವಾರದ ವಿಧಾನಮಂಡಲದ ಅಧಿವೇಶನವನ್ನು ತಕ್ಷಣಕ್ಕೆ ಕರೆಯುವಂತೆಯೂ ಅವರು ಒತ್ತಾಯಿಸಿದರು. ರಾಷ್ಟ್ರೀಯ ವಿಪತ್ತು ನಿಯಮಾವಳಿಗಳಂತೆ ಪರಿಹಾರ ನೀಡಿದರೆ ಅದು ಯಾವುದಕ್ಕೆ ಸಾಲುವುದಿಲ್ಲ. ಸರ್ಕಾರ ನೆರೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಇನ್ನು ಹೆಚ್ಚಿನ ಪರಿಹಾರ ಹಣ ನೀಡಿ ಸಂತ್ರಸ್ತರಿಗೆ ನೆರವಾಗುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕರುಗಳಾದ ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಆನಂದ್ ನ್ಯಾಮೇಗೌಡ ಉಪಸ್ಥಿತರಿದ್ದರು.

Leave a Comment