ನೆರೆಯ ಹೊರೆಯನ್ನು ಕಣ್ಣಾರೇ ಕಂಡ ಕೇಂದ್ರ ತಂಡ

ಬೆಳಗಾವಿ, ಆ 25: ಭಾರೀ ಮಳೆ ಹಾಗೂ ನದಿ ಪ್ರವಾಹದಿಂದಾಗಿ ರಾಜ್ಯದಲ್ಲಿ ಸಂಭವಿಸಿದ್ದ ಮಹಾಹಾನಿಯ ಅಧ್ಯಯನಕ್ಕೆ ಕೇಂದ್ರ ತಂಡ ರಾಜ್ಯಕ್ಕೆ ದೌಡಾಯಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿನ ನೆರೆಹಾನಿ ಅಧ್ಯಯನಕ್ಕಾಗಿ ಇಂದು ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿತು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ತಂಡ ಜಿಲ್ಲೆಯಲ್ಲಿ ನೆರೆಗೆ ತುತ್ತಾದ ಪ್ರದೇಶಗಳ ಹಾನಿ ಕುರಿತು ಚರ್ಚಿಸಿ ಅಧಿಕಾರಿಗಳಿಂದ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿತು.
ಕೇಂದ್ರ ಗೃಹ ಮತ್ತು ಆಡಳಿತ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ್ ನೇತೃತ್ವದಲ್ಲಿ ಏಳು ಜನರ ಅಧ್ಯಯನ ತಂಡ ಇಂದು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದು, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಜಿಲ್ಲೆಯಲ್ಲಿನ ಹಾನಿಗಳ ಬಗ್ಗೆ ಸಮಗ್ರ ವರದಿ ನೀಡಿದರು.
ನೆರೆಪೀಡಿತ ಪ್ರದೇಶಗಳ ಅಧ್ಯಯನಕ್ಕೂ ಮುನ್ನ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಗಳ ಸಂಗ್ರಹಿತ ಛಾಯಾಚಿತ್ರಗಳನ್ನು ಪರಿಶೀಲಿಸಿ ತಾಲೂಕಾವಾರು ವರದಿಗಳನ್ನು ಕೇಂದ್ರ ಅಧ್ಯಯನ ತಂಡ ಜಿಲ್ಲಾಧಿಕಾರಿಗಳಿಂದ ಪಡೆದುಕೊಂಡಿತು.
ಸಭೆಯ ನಂತರ ಜಿಲ್ಲೆಯಾದ್ಯಂತ ಪ್ರವಾಸ ಕೈಕೊಂಡ ಕೇಂದ್ರ ತಂಡ ಭಾರೀ ಮಳೆ ಹಾಗೂ ನದಿ ಪ್ರವಾಹದಿಂದ ತತ್ತರಿಸಿರುವ  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿಗೆ ಭೇಟಿ ನೀಡಿ ಮಂಜರಿ ಸೇತುವೆ  ಪರಿಶೀಲಿಸಿತು. ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಮನೆಮಠಗಳನ್ನು ಕಳೆದುಕೊಂಡಿರುವ ಹಾಗೂ ಕೃಷಿ ಭೂಮಿ ಅಲ್ಲದೆ ವಿದ್ಯುತ್ ಅವಘಡಕ್ಕೆ ತುತ್ತಾಗಿರುವ ಹಾನಿ ಕುರಿತು ಮಾಹಿತಿಯನ್ನು ಸಂಗ್ರಹಿಸಿತು. ಅಲ್ಲಿಂದ ತಾಲೂಕಿನ ಶಿರಗುಪ್ಪದಲ್ಲಿನ ಹಾನಿ ಬಗ್ಗೆ ಪರಿಶೀಲಿಸಿತು.
ನಂತರ ಕಾಗವಾಡ ತಾಲೂಕಿನ ಜುಗುಲ್ ಪ್ರದೇಶಕ್ಕೆ ತೆರಳಿ ರೈತರ ಬೆಳೆ ನಾಶದ ಬಗ್ಗೆ ವಿಚಾರಣೆ ನಡೆಸಲಾಯಿತು.
ಮದ್ಯಾಹ್ನ ರಾಯಬಾಗ್ ತಾಲೂಕಿನ ಕುಡಚಿ ಭಾಗದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಹಾರುಗೇರಿ ಹಾಗೂ ಗುಲಾಪುರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ನೆರೆಗೆ ಕೊಚ್ಚಿಕೊಂಡು ಹೋಗಿದ್ದು, ಈ ಸೇತುವೆಯ ಪುನರ್ ನಿರ್ಮಾಣದ ಕುರಿತು ಮಾಹಿತಿ ಸಂಗ್ರಹಿಸಿದರು.
ಅಲ್ಲಿಂದ ಗೋಕಾಕ್ ತಾಲೂಕಿನ ಹಾಗೂ ರಾಮದುರ್ಗ ತಾಲೂಕಿನ ನೆರೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಕೆ. ಜುನಿಪೇಟ್‍ನಲ್ಲಿ ನೆರೆಗೆ ಹಾನಿಯಾಗಿರುವ ಅರಣ್ಯ ಇಲಾಖೆಯ ನರ್ಸರಿಯೊಂದಕ್ಕೆ ಭೇಟಿ ನೀಡಿ, ಅಲ್ಲಿಂದ ಸುನ್ನಾಳದಲ್ಲಿನ ಶಾಲೆಯೊಂದು ಜಲಾರ್ವತದಿಂದಾಗಿ ಸಂಪೂರ್ಣ ನಾಶವಾಗಿರುವ ಬಗ್ಗೆ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲಾಯಿತು.
ಅಲ್ಲಿಂದ ರಾಮದುರ್ಗ ಹಾಗೂ ಸವದತ್ತಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಭೇಟಿ ನೀಡಿದ್ದಲ್ಲದೆ, ಅಪಾರ ಪ್ರಮಾಣದಲ್ಲಿ ಮನೆಗಳು ನೆಲಕಚ್ಚಿದ ಬಗ್ಗೆ ಹಾಗೂ ವಿದ್ಯುತ್ ಹಾನಿ ಸಂಭವಿಸಿದ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಈ ಎಲ್ಲ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ ಕೇಂದ್ರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಪುನರ್ ಚರ್ಚೆ ನಡೆಸಿ, ಪರಿಹಾರದ ಕುರಿತು ಕೇಂದ್ರಕ್ಕೆ ವರದಿ ಒಪ್ಪಿಸುವ ಬಗ್ಗೆ ಭಸವಸೆ ನೀಡಿತು.
ಈ ಸಂದರ್ಭದಲ್ಲಿ ಕೇದ್ರ ತಂಡದ ಇತರ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು, ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment