ನೆರೆಪೀಡಿತ ಪ್ರದೇಶಗಳಿಗೆ ಸಚಿವ ಖಾದರ್ ಭೇಟಿ

ಮಂಗಳೂರು, ಆ.೧೮- ದ.ಕ. ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೊದಲು ಬಂಟ್ವಾಳ ತಾಲೂಕಿನ ಗೂಡಿನಬಳಿ, ಆಲಡ್ಕ ಮತ್ತು ಪಾಣೆಮಂಗಳೂರಿಗೆ ಭೇಟಿ ನೀಡಿದರು. ನೇತ್ರಾವತಿ ಹಳೆ ಸೇತುವೆ ಸಮೀಪ ನೆರೆ ನೀರನ್ನು ವೀಕ್ಷಿಸಿದ ಸಚಿವರು, ಬಳಿಕ ಆಲಡ್ಕ ಪ್ರದೇಶದಲ್ಲಿ ನೆರೆ ನೀರಿನಿಂದ ಮುಳುಗಿದ ಜನ ವಸತಿ ಪ್ರದೇಶಗಳನ್ನು ವೀಕ್ಷಿಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ, ಅಹವಾಲು ಆಲಿಸಿದರು. ಬಳಿಕ ಉಪ್ಪಿನಂಗಡಿಗೆ ಆಗಮಿಸಿದ ಸಚಿವರು, ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು. ನೇತ್ರಾವತಿ ಮತ್ತು ಕುಮಾರಧಾರ ನದಿ ನೀರಿನ ಹರಿವು ವೀಕ್ಷಿಸಿದರು. ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಸಚಿವರು ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಸಂಚರಿಸಿದರು. ಘಾಟಿಯಲ್ಲಿ ಮಾರೇನಹಳ್ಳಿಯವರೆಗೆ ತೆರಳಿದ ಸಚಿವರು, ಹೆದ್ದಾರಿಯಲ್ಲಿ ಅಲ್ಲಲ್ಲಿ ಉಂಟಾಗಿರುವ ಕುಸಿತ ಪರಿಶೀಲಿಸಿದರು. ಶಿರಾಡಿ ವೀಕ್ಷಿಸಿದ ಸಚಿವರು, ಬಳಿಕ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಸುಬ್ರಹ್ಮಣ್ಯ ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು ೧೫ ಕುಟುಂಬಗಳ ಮನೆ ಮುಳುಗಡೆಯಾಗಿ ಅವರು ಆಶ್ರಯ ಪಡೆದಿರುವ ಕುಲ್ಕುಂದ ಸರಕಾರಿ ಶಾಲೆಗೆ ಆಗಮಿಸಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು. ಅವರ ಅಹವಾಲುಗಳನ್ನು ಆಲಿಸಿದ ಸಚಿವರು, ತಾತ್ಕಾಲಿಕ ಆಶ್ರಯತಾಣದಲ್ಲಿ ಎಲ್ಲ ರೀತಿಯ ಅಗತ್ಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯಲ್ಲಿ ಸಂತ್ರಸ್ತರಿಗೆ ಆರೋಗ್ಯ ಇಲಾಖೆಯಿಂದ ತೆರೆದಿರುವ ಚಿಕಿತ್ಸಾಲಯವನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಊಟೋಪಚಾರ ವ್ಯವಸ್ಥೆ ಏರ್ಪಡಿಸಿರುವುದಕ್ಕೆ ಸಚಿವ ಯು.ಟಿ. ಖಾದರ್ ಶ್ಲಾಘಿಸಿದರು. ನಂತರ ಸಚಿವರು ಕುಲ್ಕುಂದ ಕಾಲನಿಗೆ ಭೇಟಿ ನೀಡಿ, ಮಳೆ ಅನಾಹುತ ವೀಕ್ಷಿಸಿದರು. ಮಳೆಗಾಲ ಮುಗಿದ ಬಳಿಕ ಈ ಕಾಲನಿಗೆ ರಸ್ತೆ ಮತ್ತು ಮೂಲ ಸೌಕರ್ಯ ವ್ಯವಸ್ಥೆ ಒದಗಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿಂದ ಸಚಿವರು, ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯಲ್ಲಿ ನಿಂತು, ನದಿ ನೆರೆ ವೀಕ್ಷಿಸಿದರು. ಬಳಿಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ದರ್ಶನ ಪಡೆದು ಸ್ವಾಮೀಜಿ ಅವರನ್ನು ಭೇಟಿಯಾಗಿದರು. ಸುಬ್ರಹ್ಮಣ್ಯದಿಂದ ಸಚಿವರು ಕಿದು ಸಿಪಿಸಿಆರ್ಐಗೆ ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಮಾಲೋಚಿಸಿ, ಕಿದುವಿನಲ್ಲೇ ಸಿಪಿಸಿಆರ್ಐ ಉಳಿಸಲು ರಾಜ್ಯ ಸರಕಾರ ಎಲ್ಲ ರೀತಿಯ ಬೆಂಬಲ ನೀಡಲು ಸಿದ್ಧವಿದೆ. ಈ ಬಗ್ಗೆ ಸಂಸದರು ಮತ್ತು ಶಾಸಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಜಿಲ್ಲೆಯ ಹವಾಮಾನ ಮುನ್ನೆಚ್ಚರಿಕೆ, ದುರಂತಗಳ ಮಾಹಿತಿ ಮತ್ತು ಘಾಟಿ ರಸ್ತೆಗಳ ಸಂಚಾರ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಮುಂಜಾಗ್ರತೆಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ವೆಬ್ ಸೈಟ್ ಜಞ.ಟಿiಛಿ iಟಿ ಇದರಲ್ಲಿ ನಿರಂತರ ಮಾಹಿತಿ ನೀಡಲಾಗುವುದು. ಪ್ರತಿ ದಿನ ಎರಡು ಸಲ ಇದರಲ್ಲಿ ಈ ಕುರಿತ ಮಾಹಿತಿ ಪರಿಷ್ಕರಿಸಲಾಗುವುದು. ಸಾರ್ವಜನಿಕರು ತಮ್ಮ ದೂರ ಪ್ರಯಾಣ ಸಂದರ್ಭದಲ್ಲಿ ಇದನ್ನು ಗಮನಿಸಿ ಸಂಚಾರ ಕೈಗೊಳ್ಳಬಹುದು ಎಂದು ಸಚಿವರು ವಿವರಿಸಿದರು. ಸಚಿವರೊಂದಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪುತ್ತೂರು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಜಿಪಂ ಸದಸ್ಯ ಪಿ.ಪಿ. ವರ್ಗೀಸ್, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತಿತರರು ಇದ್ದರು.
ಪ್ರಸಕ್ತ ದ.ಕ. ಜಿಲ್ಲೆಯಲ್ಲಿ ಹಿಂದೆಂದೂ ಕಂಡುಬರದ ಮಳೆ ಬಂದು ಪ್ರಾಕೃತಿಕ ವಿಕೋಪ ಉಂಟಾಗಿದೆ. ಜನರ ಸುರಕ್ಷತೆ ಮತ್ತು ನೆರೆ ನಿಯಂತ್ರಣ ಸರಕಾರದ ಮೊದಲ ಆದ್ಯತೆಯಾಗಿದೆ. ಜನರ ಆಸ್ತಿಪಾಸ್ತಿಗಳನ್ನು ಸಾಧ್ಯವಾಗುವಷ್ಟು ಮಟ್ಟಿಗೆ ರಕ್ಷಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯ ಎಲ್ಲ ತಾಲೂಕುಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂಭಾವ್ಯ ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.
ನೆರೆ ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲ. ಎಲ್ಲ ತಹಶೀಲ್ದಾರ್ಗಳ ಬಳಿ ತಲಾ ೩೦ ಲಕ್ಷ ರೂ. ಅನುದಾನ ಇದೆ. ರಾಜ್ಯ ಸರಕಾರ ಜಿಲ್ಲೆಗೆ ಮತ್ತೆ ೫೦ ಕೋಟಿ ರೂ. ಬಿಡುಗಡೆ ಮಾಡಿದೆ. ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಮೊತ್ತ ನೀಡಲಾಗುವುದು ಎಂದು ಯು.ಟಿ. ಖಾದರ್ ಹೇಳಿದರು. ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನದಿಗಳಲ್ಲಿ ನೀರಿನ ಪ್ರಮಾಣ ಅಧಿಕವಾಗಿ ನೆರೆ ಪರಿಸ್ಥಿತಿ ಉಂಟಾಗಿದೆ. ಮಳೆಗಾಲ ಮುಗಿದ ಬಳಿಕ ಹಾನಿಯಾಗಿರುವ ರಸ್ತೆ, ಸೇತುವೆ , ಸಾರ್ವಜನಿಕ ಸ್ಥಳಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶಿರಾಡಿ ಘಾಟಿ ಬಂದ್ ಆಗಿರುವುದರಿಂದ ಹಲವಾರು ದೊಡ್ಡ ಗಾತ್ರದ ಟ್ಯಾಂಕರ್ಗಳು ಗುಂಡ್ಯ ಸಮೀಪ ಬಾಕಿಯಾಗಿದ್ದು, ಇವರಿಗೆ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ಖಾದರ್ ಹೇಳಿದರು.

Leave a Comment