ನೆರವು ಬೇಕೆ? ಉಗ್ರರ ಸದ್ದಡಗಿಸಿ: ಪಾಕ್‌ಗೆ ಯುಎಸ್ ಸೂಚನೆ

ವಾಷಿಂಗ್ಟನ್, ಸೆ. ೧೧: ಪಾಕಿಸ್ತಾನದಲ್ಲಿ ಬೇರುಬಿಟ್ಟು ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕೈಗೊಳ್ಳಲಿರುವ ಕ್ರಮಗಳ ಆಧಾರದ ಮೇಲೆ, ಅಮೆರಿಕ ಹಾಗೂ ಪಾಕಿಸ್ತಾನದ ಹೊಸ ಸರ್ಕಾರದ ನಡುವಣ ದ್ವಿಪಕ್ಷೀಯ ಸಂಬಂಧದ ವಿಧಾನ ಹಾಗೂ ಗುಣಮಟ್ಟ ನಿಂತಿದೆ ಎಂದು ಅಮೆರಿಕದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಮುನ್ಸೂಚನೆ ನೀಡಿದ್ದಾರೆ.
ಭಯೋತ್ಪಾದನಾ ಜಾಲಕ್ಕೆ ಪಾಕಿಸ್ತಾನ ಸುರಕ್ಷಿತ ನೆಲೆ ಒದಗಿಸಿದೆ; ಅದೊಂದು ಉಗ್ರಗಾಮಿಗಳ ಸ್ವರ್ಗ ಎಂಬ ಬಹು ಹಿಂದಿನ ವ್ಯಾಪಕ ದೂರು ಅಮೆರಿಕ ಮತ್ತಿತರ ದೇಶಗಳದ್ದಾಗಿದೆ. ಆ ದೇಶದ ಗಡಿ ಭಾಗಗಳಲ್ಲಿ ದಾಳಿ ನಡೆಸಲು ಈ ಸಂಘಟನೆಗಳಿಗೆ ಪಾಕ್ ಅವಕಾಶ ನೀಡುತ್ತಿದೆ ಎಂಬುದು ದೂರಿನ ತಿರುಳಾಗಿದ್ದು, ಅದನ್ನು ಆಗಾಗ ಪಾಕ್ ನಿರಾಕರಿಸುತ್ತಲೇ ಬಂದಿದೆ.
ಲಕ್ಷಗಟ್ಟಲೆ ಡಾಲರ್‌ಗಳಷ್ಟು ಹಣ ಪಡೆಯುತ್ತಿದ್ದರೂ ಪಾಕಿಸ್ತಾನ ವಂಚನೆ ಎಸಗುತ್ತಿದೆ ಎಂದು ಈ ಹಿಂದೆ ಪಾಕ್ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡುವ ಬಹುತೇಕ ಎಲ್ಲ ಸೇನಾ ನೆರವನ್ನೂ ಅಮೆರಿಕಾ ಜನವರಿಯಲ್ಲಿ ಕಡಿತಗೊಳಿಸಿದೆ.
‘ನಮ್ಮ ದ್ವಿಪಕ್ಷೀಯ ಸಂಬಂಧದ ವಿಧಾನ ಹಾಗೂ ಗುಣಮಟ್ಟವು ಪಾಕಿಸ್ತಾನವು ತನ್ನ ನೆಲದಲ್ಲಿನ ಉಗ್ರಗಾಮಿಗಳ ವಿರುದ್ಧ ಕೈಗೊಳ್ಳುವ ಅರ್ಥಪೂರ್ಣ ಕ್ರಮ ಹಾಗೂ ಕಾರ್ಯಾಚರಣೆಯನ್ನು ಅವಲಂಬಿಸಿದೆ’ ಎಂದು ಸಮೂಹ ಕರೆ (ಕಾನ್ಫರೆನ್ಸ್ ಕಾಲ್) ಸಂದರ್ಭದಲ್ಲಿ ದಕ್ಷಿಣ ಹಾಗೂ ಮಧ್ಯ ಏಷ್ಯಾಗೆ ಸಂಬಂಧಿಸಿದ ಅಮೆರಿಕದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಸ್ಪಷ್ಟಪಡಿಸಿದ್ದಾರೆ. ಈ ಸಂದೇಶವನ್ನು ಇತ್ತೀಚೆಗಷ್ಟೆ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ಅಮೆರಿಕ ಕಾರ್ಯದರ್ಶಿ ಮೈಕ್ ಪಾಂಪೆ ಮೂಲಕ ಪಾಕ್‌ಗೆ ತಲುಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Comment