ನೆರವಿನಲ್ಲಿ ಓದಿ ನಾಲ್ಕು ಚಿನ್ನದ ಪದಕ ಪಡೆದ ಪೂಜಿತಾ

ಬಳ್ಳಾರಿ, ಮೇ 14: ದುಡ್ಡು ದೊಡ್ಡಪ್ಪ ಆದರೆ ವಿದ್ಯೆ ಅವರ ಅಪ್ಪ ಎಂಬ ಗಾದೆ ಮಾತಿನಂತೆ ವಿದ್ಯೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಂಡ ಪೋಷಕರು ಮತ್ತು ಅವರಿಗೆ ಶಿಕ್ಷಣ ನೀಡಿದ ಉಪನ್ಯಾಸಕರಲ್ಲಿ ಮಂದಹಾಸ ಮನೆ ಮಾಡಿತ್ತು. ವಿದ್ಯಾರ್ಥಿಗಳು ಪ್ರಶಸ್ತಿಗಳು ಮತ್ತು ಪದಕಗಳು ಪಡೆಯುತ್ತಿರುವುದನ್ನು ನೋಡುತ್ತಿದ್ದ ಪೋಷಕರ ಕಣ್ಣಂಚಲ್ಲೂ ಆನಂದ ಬಾಷ್ಪ ತುಂಬಿತ್ತು.

ಹೌದು ಇಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವಿವಿದ್ಯಾಲದ 7 ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಸುವರ್ಣ ಪದಕಗಳನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಇಂತಹ ದೃಶ್ಯ ಕಂಡುಬಂದಿದು ಸಾಮಾನ್ಯವಾಗಿತ್ತು.

ವಿಎಸ್‍ಕೆ ವಿಶ್ವವಿದ್ಯಾಲಯದ ಎಂಕಾಂ ಫೈನಾನ್ಸ್ ವಿಷಯದಲ್ಲಿ ಕಂಪ್ಲಿ ತಾಲೂಕಿನ ಶ್ರೀರಾಮರಂಗಪುರ ಗ್ರಾಮದ ವಿದ್ಯಾರ್ಥಿನಿ ಕುಸುಮೂರ್ತಿ ಪೂಜಿತಾ ಅವರು 2200 ಅಂಕಗಳಿಗೆ 1701 ಅಂಕಗಳನ್ನು ಪಡೆದು ಶೇ.77.03 ಫಲಿತಾಂಶ ಪಡೆದು 4 ಸುವರ್ಣ ಪದಕ ಪಡೆದಿದ್ದಾರೆ. ಇಂದು ನಡೆದ ಘಟಿಕೋತ್ಸವ ಸಮಾರಂಭದ ವೇದಿಕೆ ಮೇಲೆ ಸುವರ್ಣ ಪದಕಗಳನ್ನು ಪಡೆಯುತ್ತಿದ್ದಂತೆಯೇ ವಿದ್ಯಾಭ್ಯಾಸದಲ್ಲಿ ಮಗಳ ಉತ್ತಮ ಸಾಧನೆ ಕಂಡು ಪೂಜಿತಾ ಅವರ ತಂದೆ ಕೆ. ವೆಂಕಟೇಶಲು ಮತ್ತು ತಾಯಿ ಕೆ. ಉಮಾದೇವಿ ಅವರು ಆನಂದ ಬಾಷ್ಪದಿಂದ ಒದ್ದೆಯಾಗಿದ್ದ ಕಣ್ಣಂಚು ಸವರಿಕೊಂಡು ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಂಜೆವಾಣಿಯೊಂದಿಗೆ ಮಾತನಾಡಿದ ವೆಂಕಟೇಶಲು, ನಾವು ವ್ಯವಸಾಯ ಮಾಡುತ್ತಿದ್ದು, ನಮ್ಮ ಮಗಳಿಗೆ ವಿದ್ಯಾಭ್ಯಾಸ ಕೊಡಿಸುವಷ್ಟು ಆರ್ಥಿಕ ಶಕ್ತಿಯೂ ಸಹ ನಮಗಿರಲಿಲ್ಲ. ಪೂಜಿತಾ ಒಂದನೆ ತರಗತಿಯಿಂದ ಮೂರನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ಧಾಳೆ, ನಂತರ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದು, ಹೈಸ್ಕೂಲ್‍ಗೆ ಬಂದಾಗ, ನಮ್ಮಿಂದ ಇಂಗ್ಲಿಷ್ ಮಾಧ್ಯಮ ಓದಿಸಲಾಗದೇ, ಬಳ್ಳಾರಿಯಲ್ಲಿರುವ ನಮ್ಮ ಸಂಬಂಧಿಕರ ಮನೆಯಲ್ಲಿರಿಸಿ, ಆಶೀರ್ವಾದ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸುವ ಪರಿಸ್ಥಿತಿ ಬಂದಿತ್ತು. ಆದರೂ ಮಗಳು ಇಂದು ಪಡೆದಿರುವ ನಾಲ್ಕು ಸುವರ್ಣ ಪದಕ ಪಡೆದಿರುವುದು ಕಂಡು ನನ್ನ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಕ್ಕೆ ಸಾರ್ಥಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರನಗೌಡ ಮೊದಲ ಱ್ಯಾಂಕ್ :
ಹೂವಿನಹಡಗಲಿಯ ಬೂದನೂರು ಗ್ರಾಮದ ರಾಜಕುಮಾರ ಚೆನ್ನ ವೀರನಗೌಡ ಜಿಬಿಆರ್ ಕಾಲೇಜಿನಲ್ಲಿ ಬಿ.ಎ, ಐಚ್ಚಿಕ ಇಂಗ್ಲಿಷ್ ವಿಷಯದಲ್ಲಿ ಮೊದಲ ರ್ಯಾಂಕ್ ಪಡೆದು ಸುವರ್ಣ ಪದಕ ಪಡೆದಿದ್ದಾರೆ. ವೀರನಗೌಡನ ತಂದೆ-ತಾಯಿ ವ್ಯವಸಾಯ ಮಾಡುತ್ತಿದ್ದು, ಕಷ್ಟದ ಜೀವನವೇ ನನಗೆ ಈ ಸಾಧನೆಗೆ ಪೂರಕವಾಗಿದೆ ಎಂದು ವೀರನಗೌಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬಿಎಡ್‍ನಲ್ಲಿ ಮೊದಲ ಱ್ಯಾಂಕ್:
ನಗರದ ಬೆಂಗಳೂರು ರಸ್ತೆಯ ನಿವಾಸಿ ಐಶ್ವರ್ಯ ಲಕ್ಷ್ಮೀ ಅವರು ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಬಿಎಡ್‍ನಲ್ಲಿ ಮೊದಲ ಱ್ಯಾಂಕ್ ಪಡೆದು ಸುವರ್ಣ ಪದಕ ಪಡೆದಿದ್ದಾರೆ. ಬಳ್ಳಾರಿಯವರೇ ಆಗಿರುವ ಲಕ್ಷ್ಮೀ ಅವರ ಪೋಷಕರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಒಟ್ಟಾರೆ, ಇಂದು ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆ ಕಂಡ ಪೋಷಕರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಎಷ್ಟು ಖರ್ಚಾದರೂ ಚಿಂತೆಯಿಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೇಬೇಕೆಂಬ ಉತ್ಸಾಹ ಕಂಡು ಬಂತು.
ನಮ್ಮ ತಂದೆ-ತಾಯಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ನನಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಆಗ ಹಣವೇ ಇರಲಿಲ್ಲ. ಆದ್ರೂ ನಮ್ಮ ಸಂಬಂಧಿಕರ ಮನೆಯಲ್ಲಿರಿಸಿ ನನಗೆ ವಿದ್ಯಾಭ್ಯಾಸ ಕೊಡಿದ್ದಾರೆ. ತಮ್ಮ ತಂದೆ-ತಾಯಿ ಕಷ್ಠವೇ ನನ್ನ ಈ ಸಾಧನೆಗೆ ಪೂರವಾಗಿದೆ. ಕಷ್ಟವನ್ನು ಅರಿತು ವಿದ್ಯಾಭ್ಯಾಸವನ್ನು ಮಾಡಿದ ಫಲವಾಗಿ ನನಗೆ ಒಂದು ನಾಲ್ಕು ಗೋಲ್ಡ್ ಮೆಡಲ್ ಬಂದಿವೆ.
-ಕೆ. ಪೂಜಿತಾ, ಶ್ರೀರಾಮರಂಗಪುರ

ಕಷ್ಟದಿಂದಲೇ ಇಷ್ಟ ಪಟ್ಟು ಓದಿದ್ದೇವೆ. ಈ ಸಾಧನೆಗೆ ಕಾಲೇಜಿನ ಉಪನ್ಯಾಸಕರು, ಸ್ನೇಹಿತರು ಮತ್ತು ಪೋಷಕರ ಸಹಕಾರವು ಪೂರಕವಾಗಿದೆ. ಯಾವುದೇ ಸಾಧನೆ ಮಾಡಬೇಕಾದರೆ, ಗುರಿ ಮತ್ತು ಗುರು ಅವಶ್ಯಕ. ಈ ಹಿನ್ನೆಲೆಯಲ್ಲಿ ನನಗೆ ಗುರಿ ಇತ್ತು. ಅದಕ್ಕೆ ಪ್ರತಿಯಾಗಿ ನನ್ನ ತಂದೆ-ತಾಯಿ ಗುರುಗಳಂತೆ ಬೆಂಬಲ ನೀಡಿದ್ದಾರೆ.
-ಐಶ್ವರ್ಯ ಲಕ್ಷ್ಮೀ, ಬಳ್ಳಾರಿ.

ನಾನು ನನ್ನ ಜೀವನದಲ್ಲಿ ವಿದ್ಯಾಭ್ಯಾಸದಲ್ಲಿ ಟಾರ್ಗೇಟ್ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ರ್ಯಾಂಕ್ ಪಡೆಲೇಬೇಕು ಎಂಬ ಗುರಿ ಹೊಂದಿದ್ದೆ. ಗುರಿಗೆ ತಕ್ಕಂತೆ ಶ್ರಮಪಟ್ಟು ವಿದ್ಯಾಭ್ಯಾಸವೂ ಮಾಡಿದೆ. ಇಂದು ನನಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ.
-ರಾಜಕುಮಾರ ಚೆನ್ನವೀರನಗೌಡ. ಹೂವಿನಹಡಗಲಿ.

Leave a Comment