ನೆಚ್ಚಿನ ನಾಯಕನ ದರ್ಶನಕ್ಕೆ ಹರಿದು ಬಂದ ಜನಸಾಗರ

ಚೆನ್ನೈ, ಆ ೮- ಇಲ್ಲಿನ ರಾಜಾಜಿ ಹಾಲ್‌ನಲ್ಲಿ ಇರಿಸಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ಹರಿದು ಬರುತ್ತಿದೆ.
ಕಳೆದ ರಾತ್ರಿ ಕರುಣಾನಿಧಿಯವರ ಪುತ್ರಿ ಕನಿಮೋಳಿ ನಿವಾಸದಲ್ಲಿ ಕುಟುಂಬ ಸದಸ್ಯರು ಅಂತಿಮ ದರ್ಶನ ಪಡೆದಿದ್ದು, ಬೆಳಗ್ಗೆ ರಾಜಾಜಿ ಹಾಲ್‌ಗೆ ಪಾರ್ಥಿವ ಶರೀರವನ್ನು ತರಲಾಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು ರಾತ್ರಿಯಿಂದಲೇ ರಾಜಾಜಿ ಹಾಲ್ ಬಳಿ ಕಾದು ಕುಳಿತಿದ್ದು, ಪಾರ್ಥಿವ ಶರೀರ ಬರುತ್ತಲೇ ಅಂತಿಮ ದರ್ಶನಕ್ಕಾಗಿ ಮುಗಿಬಿದ್ದರು. ನೆಚ್ಚಿನ ನಾಯಕನ ಕಂಡು ಸ್ಥಳದಲ್ಲೇ ಸಾರ್ವಜನಿಕರು ಕಂಬಿನಿ ಮಿಡಿಯುತ್ತಲೇ ನಮನ ಸಲ್ಲಿಸಿದರು.
ತಮಿಳುನಾಡಿನ ವಿವಿಧ ಭಾಗಗಳಿಂದ ಡಿಎಂಕೆ ಕಾರ್ಯಕರ್ತರು, ಅಭಿಮಾನಿಗಳು ಚೆನ್ನೈನತ್ತ ಧಾವಿಸುತ್ತಿದ್ದು, ಇಂದು ಸಂಜೆಯವರೆಗೂ ಗಣ್ಯರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸಹ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜಾಜಿ ಹಾಲ್ ಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

Leave a Comment