ನೃತ್ಯಾಂಕುರದ ಆಹ್ಲಾದಕರ ನೃತ್ಯ ಸಿಂಚನ

ಅದೊಂದು ವೈವಿಧ್ಯಪೂರ್ಣ ನೃತ್ಯೋಲ್ಲಾಸದ ಸವಿಸಂಜೆ. ನವ ಚೈತನ್ಯ ಚಿಮ್ಮುವ ಯುವಕ-ಯುವತಿಯರು ತಮ್ಮ ನೃತ್ಯ ಕೌಶಲ್ಯವನ್ನು, ಪ್ರತಿಭಾ ಸಾಮರ್ಥ್ಯವನ್ನು ಚೆಂದವಾಗಿ ಅಭಿವ್ಯಕ್ತಿಸಿದ ಸಂದರ್ಭ. ಇತ್ತೀಚಿಗೆ ‘ಸುಚಿತ್ರಾ ‘ ಆವರಣದ ಭಾನು ನಾಣಿ ನೆನಪಿನ ಅಂಗಳದಲ್ಲಿ ಭರತನಾಟ್ಯ, ಕಥಕ್, ಸೆಮಿ ಕ್ಲಾಸಿಕಲ್ ಮತ್ತು ಜಾನಪದ ಸೊಗಡಿನ ಮಿಂಚಿನ ಸಂಚಾರದ ನೃತ್ಯಗಳು ರಸಿಕರ ಮನತಣಿಸಿದವು. ‘ನೃತ್ಯಾಂಕುರ’ ? ಯುವ ಪ್ರತಿಭೆಗಳು ಒಗ್ಗೂಡಿ ರಚಿಸಿದ ಹೊಸ ನೃತ್ಯ ತಂಡವಿದು.

ಆಕರ್ಷಕ ವೇಷ-ಭೂಷಣಗಳು ಮೊದಲ ನೋಟಕ್ಕೆ ಸೆಳೆದಂತೆ ನೃತ್ಯದ ಮಜಲುಗಳೂ ಅಷ್ಟೇ ಕುತೂಹಲ ಕೆರಳಿಸಿದವು.  ನಗುಮುಖದಿಂದ ರಂಗವನ್ನು ಪ್ರವೇಶಿಸಿದ ಅಮೃತಾ ಮತ್ತು ಸುಶ್ಮಿತಾ ‘ಪುಷ್ಪಾಂಜಲಿ’ಯ ಮೂಲಕ ಗುರು-ಹಿರಿಯರಿಗೆ, ಕಲಾರಸಿಕರಿಗೆ ಅಂಜಲಿಬದ್ಧರಾಗಿ ನಮಿಸುತ್ತಾ, ಸುಂದರವಿನ್ಯಾಸದ ನೃತ್ತಮಂಜರಿಯನ್ನು ಪ್ರದರ್ಶಿಸಿದರು. ರಂಗಾಕ್ರಮಣ ಮತ್ತು ಆಕಾಶಚಾರಿಗಳನ್ನು ಲೀಲಾಜಾಲವಾಗಿ ನಿರ್ವಹಿಸಿ, ತಮ್ಮ ಮಿಂಚಿನ ಸಂಚಾರದ ಚಲನೆಗಳಿಂದ ಸಂಚಲನವನ್ನುಂಟು ಮಾಡಿದರು. ‘ವಕ್ರತುಂಡ ಮಹಾಕಾಯ’ ಗಣಪತಿಯನ್ನು ಸ್ತುತಿಸುತ್ತ ಅವನ ವಿವಿಧ ರೂಪಗಳನ್ನು ಸುಂದರಭಂಗಿಗಳಲ್ಲಿ ಪ್ರದರ್ಶಿಸಿದರು. ಗಣೇಶನ ಮಹಿಮೆಯನ್ನು ಮನೋಹರ ಆಂಗಿಕಾಭಿನಯದಲ್ಲಿ ಪ್ರಸ್ತುತಪಡಿಸಿದರು. ಅವನ ಜನನದ ವೃತ್ತಾಂತ ಅರುಹುವ ಸಂಚಾರಿಯನ್ನು ಕಲಾಪೂರ್ಣವಾಗಿ  ನಿರೂಪಿಸಿದರು. ಇದರಲ್ಲಿ ಕಲಾವಿದೆ ನಾಗಲಕ್ಷ್ಮಿಯೂ ಜೊತೆಗೂಡಿದರು.

nrutyankura-amrutha-clr

‘ಶಂಭೋ ಶಿವ ಶಂಭೋ’ ಶಿವಸ್ತುತಿ ಅನುಪಮವಾಗಿ ಮೂಡಿಬಂತು. ತಾಂಡವದ ಅಡವುಗಳು, ರೌದ್ರಭಾವ, ಢಮರು ನಿನಾದದ ನರ್ತನ, ಪರಿಣಾಮಕಾರಿಯಾಗಿ ಪ್ರಸ್ತುತಗೊಂಡಿತು. ಶಿವ, ನೀಲಕಂಠನಾದ ಸಂಚಾರಿಯ ಕಥೆ ಸ್ಫುಟವಾಗಿ ಅಭಿವ್ಯಕ್ತವಾಯಿತು. ವರ್ಚಸ್ವೀ ಮುಖಭಾವದಲ್ಲಿ ಕಲಾವಿದೆಯರು ವಿವಿಧ ನೃತ್ತಗಳನ್ನು ನಿರೂಪಿಸಿ ತಮ್ಮ ನರ್ತನ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದರು. ಸಮುದ್ರಮಂಥನ ದೃಶ್ಯ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ವಿಶೇಷ.

‘ದುರ್ಗೇ ದುರ್ಗೇ ಜಯ ದುರ್ಗೇ ‘ ರೇವತಿ ರಾಗದ ಕೃತಿಯಲ್ಲಿ,  ಚಾಮುಂಡೆಶ್ವರಿ, ಚಂಡ-ಮುಂಡ ರಕ್ಕಸರ ವಧಿಸಿ, ಮಹಿಷಾಸುರನನ್ನು ಸಂಹರಿಸುವ ಕಥಾನಕ, ದೇವಿಯ ರೌದ್ರಭಾವಗಳು, ವೀರಾವೇಶದ ಆಂಗಿಕಗಳು ಪ್ರಭಾವಶಾಲಿಯಾಗಿ ವ್ಯಕ್ತವಾಗಿ ರಸಿಕರ ಮೆಚ್ಚುಗೆಗೆ ಪಾತ್ರವಾದವು. ಕಲಾವಿದೆಯರ ನಡುವಿನ ಸಾಮರಸ್ಯ ಗಮನಾರ್ಹವಾಗಿ ಎದ್ದುಕಂಡಿತು. ರಕ್ಕಸನಾಗಿ ಉಪಟಳ ನೀಡಿದ ಕಲಾವಿದನ ಅಭಿನಯ ಮತ್ತು ಕಲಾವಿದೆಯರ ಭಾವಪೂರ್ಣ ಅಭಿನಯ ಸೊಗಸಾಗಿದ್ದವು.

ಕುಳಿತ ಭಂಗಿಯಲ್ಲಿ ತಮ್ಮ ಆಂಗಿಕಗಳನ್ನು ಪ್ರದರ್ಶಿಸಿ ಲಾಸ್ಯಾಭಿನಯ ಅಭಿವ್ಯಕ್ತಿ, ಮಂಡಿಯ ಮೇಲೆ ಕುಳಿತು ತೋರಿದ ಹಸ್ತಚಲನೆ ಮತ್ತು ಎದ್ದುನಿಂತು ಪ್ರದರ್ಶಿಸಿದ ವಿವಿಧ ಸುಂದರ ಜತಿಗಳು, ಬಾಗು-ಬಳುಕು-ತ್ರಿಭಂಗಿಗಳು ಮನಸೆಳೆದವು. ಐದುಜನ ಕಲಾವಿದರು ಸೇರಿ ಪ್ರದರ್ಶಿಸಿದ ‘ಶಿವ ತಾಂಡವ’ದಲ್ಲಿ ಶಿವನ ವಿರಾಟ್ ಸ್ವರೂಪ ಅದ್ಭುತವಾಗಿ ಮೂಡಿಬಂತು. ರಾವಣಾಷ್ಟಕ, ಮಂಡಿ ಅಡವುಗಳ ಚಮತ್ಕಾರ, ಆಕಾಶಚಾರಿಗಳ ಕಸರತ್ತು, ಅರೆ ಶಾಸ್ತ್ರೀಯ ಮಿಂಚಿನಲ್ಲಿ ಹದವಾಗಿತ್ತು. ‘ಏನೀ ಮಹಾನಂದವೇ?..” ಡಿವಿಜಿ ಯವರ ಅಂತಃಪುರದ ಗೀತೆ ಮನೋಜ್ಞ ಭಂಗಿಗಳಿಂದ ಚೆಂದವೆನಿಸಿತು.

ಗೋಪಿಕಾ ಸ್ತ್ರೀಯರ ಮಧ್ಯೆ ಕೃಷ್ಣ, ತನ್ನ ವರ್ಣರಂಜಿತ ವ್ಯಕ್ತಿತ್ವ-ತುಂಟಾಟಗಳಿಂದ ಮನಸೆಳೆದ ರಮ್ಯವಿಲಾಸದ ನರ್ತನ ಮನರಂಜಿಸಿತು. ಹಿನ್ನಲೆಯ ಕೊಳಲಗಾನ, ನವಿರಾದ ಚಲನೆಗಳ ಕಥಕ್ ಶೈಲಿಯ ನೃತ್ಯ ನಲಿವನ್ನು ಪಸರಿಸಿತು. ಅಂತ್ಯದಲ್ಲಿ ಮೈನವಿರೇಳಿಸಿದ ಜಾನಪದ ನೃತ್ಯ, ಹೃದಯಸ್ಪರ್ಶಿ ದೇಶಭಕ್ತಿ ಗೀತೆ ‘ವಂದೇ ಮಾತರಂ’ ಭಾವಪೂರ್ಣವಾಗಿ ಹೃದಯವನ್ನು ತುಂಬಿತು.

ಕಾರ್ಯಕ್ರಮದ ಶೋಭೆಯಾಗಿ ಹಾಸ್ಯದ  ಕಚಗುಳಿ ಇಡುವಂತಿದ್ದ ನಿರೂಪಣೆಯನ್ನು  ನಾಚೇಗೌಡ  ಮತ್ತು ಸ್ವಾತಿ ನಡೆಸಿಕೊಟ್ಟರು.

ವೈ.ಕೆ.ಸಂಧ್ಯಾ ಶರ್ಮ    

Leave a Comment