ನೂರಾರು ಎಕರೆ ಬೆಳೆ ನಷ್ಟ

ರಾಯಚೂರು, ಅ. ೨೩- ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹದ ಆರ್ಭಟದಲ್ಲಿ ಕೊಂಚ ಕಡಿಮೆ ಎನಿಸಿದರೂ, ನದಿ ಪಾತ್ರದ ಜನರು ಮಾತ್ರ ಮುಳುಗಡೆ ಭೀತಿಯಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ.
ಕೃಷ್ಣಾ ನದಿಯಲ್ಲಿ ನಿನ್ನೆ ೩ ಲಕ್ಷ ಕ್ಯೂಸೆಕ್ ನೀರು ಹರಿದ ಪರಿಣಾಮ ಮೂರು ಸೇತುವೆ ಮುಳುಗಡೆಯಾಗಿವೆ. ನಿನ್ನೆ ರಾತ್ರಿಯಿಂದ ಭೀಮಾ ನದಿಗೆ ೧.೨೫ ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ರಾಯಚೂರು ತಾಲೂಕಿನ ಕೃಷ್ಣಾ ನದಿಯಲ್ಲಿ ನೀರಿನ ಪ್ರವಾಹ ೪ ಲಕ್ಷ ಕ್ಯೂಸೆಕ್ ಮುಟ್ಟುವ ಸಾಧ್ಯತೆಗಳಿವೆ. ಆದರೆ, ಇಂದು ಮುಂಜಾನೆ ಆಲಮಟ್ಟಿಯಿಂದ ಹೊರ ಬಿಡುವ ನೀರಿನ ಪ್ರಮಾಣ ೨.೫೦ ಲಕ್ಷಕ್ಕೆ ಇಳಿದಿದೆ.
ಪ್ರಸ್ತುತ ಕೃಷ್ಣಾ ನದಿಯಲ್ಲಿರುವ ಶೀಲದಹಳ್ಳಿ, ಜಲದುರ್ಗ ಮತ್ತು ಹೂವಿನಹೆಡಗಿ ಸೇತುವೆಗಳು ಸಂಪೂರ್ಣ ಮುಳುಗಿ ಹೋಗಿವೆ. ಈ ಮೂರು ಸೇತುವೆಗಳ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದ ಲಿಂಗಸೂಗೂರು ತಾಲೂಕಿನ ಕಡದರಗಡ್ಡಿ, ಶೀಲದಹಳ್ಳಿ, ಯರಗೋಡು ಹಾಗೂ ರಾಯಚೂರು ತಾಲೂಕಿನಲ್ಲಿ ಕುರ್ವಕಲಾ, ಕುರ್ವಕುರ್ದಾ ಮತ್ತು ಮಂಗಿಗಡ್ಡ ನಡುಗಡ್ಡೆಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಈ ೬ ನಡುಗಡ್ಡೆಗಳಲ್ಲಿ ನೂರಾರು ಜನ ವಾಸವಾಗಿದ್ದು, ಇವರು ಪ್ರವಾಹ ಸಂದರ್ಭದಲ್ಲಿ ನದಿ ದಾಟದಂತೆ ಕಟ್ಟುನಿಟ್ಟಿನ ಸೂಚನೆ ಜಾರಿಗೊಳಿಸಲಾಗಿದೆ. ದಿನ ಬಳಕೆ ವಸ್ತುಗಳನ್ನು ಅವರಿರುವ ಸ್ಥಳದಲ್ಲಿಯೇ ಪೂರೈಸುವ ಮೂಲಕ ಅವರಿಗೆ ಜಿಲ್ಲಾಡಳಿತ ನೆರವಾಗಿದೆ. ನಡುಗಡ್ಡೆಯಲ್ಲಿರುವ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಮೇಲ್ಭಾಗದಲ್ಲಿ ಮಳೆ ಪ್ರಮಾಣ ತೀವ್ರವಾಗಿದ್ದರಿಂದ ಭೀಮಾ ಮತ್ತು ಕೃಷ್ಣಾ ನದಿಯ ಪ್ರವಾಹ ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕುಗಳ ನದಿ ಪಾತ್ರದ ೨೬ ಗ್ರಾಮಗಳಿಗೆ ಕಂಟಕವಾಗಿದೆ.
೩ ಲಕ್ಷ ನೀರಿನ ಪ್ರವಾಹದಿಂದ ನದಿ ಹಂಚಿನಲ್ಲಿರುವ ಅನೇಕ ಗದ್ದೆಗಳು ಮುಳುಗಡೆಗೊಂಡಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಡಳಿತ ಕಾಲ ಕಾಲಕ್ಕೆ ನೀರಿನ ಪ್ರವಾಹ ಪರಿಸ್ಥಿತಿ ಅಧ್ಯಯನ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರಸ್ತುತ ಕೃಷ್ಣಾ ನದಿಯಲ್ಲಿ ೫೦ ಸಾವಿರ ಕ್ಯೂಸೆಕ್ ನೀರಿನ ಹೊರ ಹರಿವು ಕಡಿಮೆಯಾಗಿದ್ದರಿಂದ ಕೊಂಚ ನೆಮ್ಮದಿಯ ನಿಟ್ಟಿಸುರು ಬಿಡುವಂತೆ ಮಾಡಿದೆ.
ತುಂಗಭದ್ರಾ ನದಿಯಲ್ಲಿ ನೀರಿನ ಪ್ರವಾಹ ಮಟ್ಟ ಹೆಚ್ಚುತ್ತಿದ್ದರಿಂದ ಎಲೆ ಬಿಚ್ಚಾಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ತಪಸ್ಸು ಮಂಟಪ ಜಲಾವೃತಗೊಂಡಿದೆ. ತುಂಗಭದ್ರಾ ನದಿ ಭಾಗದಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೂ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾವುದೇ ಅವಘಡವೂ ಉಂಟಾಗಿಲ್ಲ.

Leave a Comment