ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದ್ದೇ ನಾವು; ವಿಧಾನಸಭೆಯಲ್ಲಿ ಕಾಂಗ್ರೆಸ್ ಲೇವಡಿ

ಬೆಂಗಳೂರು, ಫೆ 18 – ವಿಧಾನಸಭಾ ಕಲಾಪದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೂತನ ಸಚಿವರನ್ನು ಪರಿಚಯಿಸಲು ಮುಂದಾದಾಗ ವಿಪಕ್ಷ ನಾಯಕರು, ಅವರನ್ನು ಸದನಕ್ಕೆ ಪರಿಚಯಿಸಿದ್ದೇ ನಾವು. ಹೊಸದಾಗಿ ಪರಿಚಯಿಸುವ ಅಗತ್ಯವೇನಿದೆ ಎಂದು ಲೇವಡಿ ಮಾಡಿದ ಘಟನೆ ನಡೆಯಿತು.

ಮಂಗಳವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಷ್ಟಾಚಾರದಂತೆ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಅಂತೆಯೇ ಯಡಿಯೂರಪ್ಪ, ಸದನದಲ್ಲಿ ಹಾಜರಿರದ ಸಚಿವರದ್ದೂ ವಿವರ ನೀಡಲಾರಂಭಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಾಜರಿರದ ಸಚಿವರ ಪರಿಚಯವನ್ನೇಕೆ ನೀಡುತ್ತಿದ್ದೀರಿ. ಇಷ್ಟಕ್ಕೂ ಅವರ ಪರಿಚಯ ಮಾಡಿಕೊಡುವ ಅಗತ್ಯವೇನಿದೆ. ನಮ್ಮ ಪಕ್ಷದಿಂದಲೇ ಹೋದವರಲ್ಲವೇ ಎಂದರು.

ಆಗ ಕಾಗೇರಿ, ಬಹುಶಃ ಬಿಜೆಪಿ ಪಕ್ಷದವರಿಗೇ ಅವರ ಪರಿಚಯ ಮಾಡಿಕೊಡಬೇಕೇನೋ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ಅವರನ್ನು ಸದನಕ್ಕೆ ಪರಿಚಯಿಸಿದ್ದೇ ನಾವು ಎಂದರು.

ಸಚಿವರ ಪರಿಚಯ ಪೂರ್ಣಗೊಂಡ ನಂತರ ಕಾಂಗ್ರೆಸ್ ನ ರಾಮಲಿಂಗಾ ರೆಡ್ಡಿ, ಬಿಜೆಪಿಯ ಯಾವ ಮುಖದಲ್ಲೂ ಖುಷಿಯೇ ಕಾಣುತ್ತಿಲ್ಲ ಎಂದು ಲೇವಡಿ ಮಾಡಿದರು.

Leave a Comment